ಮಳೆಗಾಲದ ಆರಂಭದಲ್ಲೇ ಯಾರು ಊಹಿಸದಷ್ಟು ಮಳೆಯಾಗುತ್ತಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ದಾಖಲೆ ಮಳೆಯಾಗುತ್ತಿದೆ. ಹೀಗಾಗಿ ಎಲ್ಲೆಡೆಯೂ ಅಲರ್ಟ್ ಘೋಷಣೆಯಾಗುವುದು ನಾವು ನೋಡುತ್ತದ್ದೇವೆ. ಕಳೆದೊಂದು ವಾರದ ಹಿಂದೆ ಬೆಂಗಳೂರಿನಲ್ಲಿ ಜಲ ಪ್ರಳಯ ನೋಡಿದ್ದ ಮಂದಿಗೆ ಈಗ ಎಲ್ಲಾ ಕಡೆಯಲ್ಲೂ ಮಳೆಯಾಗುತ್ತಿರುವುದು ಅಚ್ಚರಿ ಹುಟ್ಟಿಸಿದೆ.
ಹಾಗೆ ರಾಜ್ಯದಲ್ಲಿ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟ ಏರಿಕೆಯಾಗಿರುವುದು ಕೂಡ ದೊಡ್ಡ ಸಂತಸದ ವಿಚಾರವಾಗಿದೆ. ಆದ್ರೆ ಈಗ ಹಲವು ಪ್ರದೇಶದಲ್ಲಿ ಮಳೆ ಸಮಸ್ಯೆಗಳ ತರುತ್ತಿದೆ. ಬೆಂಗಳೂರು ಮಾತ್ರವಲ್ಲ ಉಳಿದಂತೆ ರಾಜ್ಯದ ನಾನಾ ಭಾಗದಲ್ಲಿ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಮಲೆನಾಡು, ಕರಾವಳಿ ಜನಜೀವನ ಅಸ್ತವ್ಯಸ್ತವಾಗಿದೆ.
ಹಲವು ಭಾಗದಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆಯಾಗಿದ್ದರೆ, ಉಳಿದಂತೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಹಾಗೆ ಗಾಳಿಯ ವೇಗ ಕೂಡ ಹೆಚ್ಚಾಗಿರಲಿದ್ದು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಇನ್ನು ಮುಂದಿನ ಎರಡರಿಂದ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಯಾವಾಗಲು ಇಂತಹ ಮಳೆಯಾದ ಸಂದರ್ಭದಲ್ಲಿ ಅಲರ್ಟ್‌ಗಳ ಘೋಷಿಸುವುದು ನೋಡಬಹುದು. ರೆಡ್ ಅಲರ್ಟ್, ಹಳದಿ ಅಲರ್ಟ್, ಆರೆಂಜ್ ಅಲರ್ಟ್ ಹೀಗೆ ಪ್ರದೇಶದಲ್ಲಿ ಮಳೆಯ ಅನುಗುಣವಾಗಿ ಈ ರೀತಿಯ ಅಲರ್ಟ್ ಅನ್ನು ಘೋಷಿಸಲಾಗುತ್ತದೆ. ಸಾಮಾನ್ಯವಾಗಿ 4 ರೀತಿಯ ಅಲರ್ಟ್ ಅನ್ನು ಘೋಷಿಸಲಾಗುತ್ತದೆ. ಆದ್ರೆ ಈ ಅಲರ್ಟ್‌ಗಳನ್ನು ಏಕೆ ನೀಡಲಾಗುತ್ತೆ. ಇದರ ಹಿಂದಿರುವ ಅರ್ಥವೇನು? ಇದರಿಂದ ಜನರು ಏನು ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಸಿರು (Green Alert): ಸಾಮಾನ್ಯಾಗಿ ಮಳೆಗಾಲ ಅಲ್ಲದೆ ಇರುವ ಸಮಯದಲ್ಲಿ ಹವಾಮಾನ ಇಲಾಖೆಯು ಹೊರಡಿಸುವ ಅಥವಾ ಬಿಡುಗಡೆ ಮಾಡುವ ಸ್ಥಳೀಯ ಹವಾಮಾನದಲ್ಲಿ ಹಸಿರು ಅಲರ್ಟ್ ನೋಡಬಹುದು. ಮಳೆ ಇಲ್ಲದಿರುವ ಹಾಗೆ ವಿರಳ, ಶುಷ್ಕ ವಾತಾವರಣವನ್ನು ಇದು ಪ್ರತಿನಿಧಿಸಲಿದೆ. ಇದರ ಅರ್ಥ ಯಾವುದೇ ಗಂಭೀರ ಹವಾಮಾನ ಅಥವಾ ಪ್ರತಿಕೂಲ ಹವಾಮಾನ ಇಲ್ಲ ಎಂಬುದಾಗಿದೆ. ಇದೊಂದು ಸಾಮಾನ್ಯ ದಿನ ಎಂದು ಪರಿಗಣಿಸಬಹುದು.
ಹಳದಿ ( Yellow Alert): ಹಳದಿ ಎಚ್ಚರಿಕೆಯನ್ನು ಆಗಾಗ ನೀಡುತ್ತಲೇ ಇರಲಾಗುತ್ತದೆ. ಇದು ಮಧ್ಯಮದಿಂದ ಕೂಡಿದ ಮಳೆಯ ಸಂಕೇತವಾಗಿರಲಿದೆ. ಈ ರೀತಿ ಮಳೆಯನ್ನು ನೀವು ಯಾವಾಗಲು ನೋಡಬಹುದು. ಮಳೆಯಾಗುತ್ತಿದ್ದರೂ ನಿಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಇದರಿಂದ ಬಹುತೇಕ ಹಾನಿಯಾಗುವುದಿಲ್ಲ ಎಂಬರ್ಥ ನೀಡಲಿದೆ. ಆದರೆ ತಗ್ಗು ಪ್ರದೇಶದ ಜನರು ಎಚ್ಚರ ವಹಿಸಬೇಕು ಎಂಬ ಸೂಚನೆ ನೀಡಲಿದೆ.
ಆರೆಂಜ್ (Orange Alert): ಆರೆಂಜ್ ಅಥವಾ ಕಿತ್ತಳೆ ಅಲರ್ಟ್ ಸೂಚನೆಯಲ್ಲಿ ಜನರು ಎಚ್ಚರ ವಹಿಸಬೇಕು ಎಂಬುದನ್ನು ಸೂಚಿಸಲಿದೆ. ಸಾಮಾನ್ಯವಾಗಿ 115ರಿಂದ 204 ಮಿ.ಮೀ ಮಳೆಯಾಗುವ ಸಾಧ್ಯತೆಯಲ್ಲಿ ಈ ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗುತ್ತದೆ. ತೀವ್ರ ಮಳೆಯು ಪ್ರವಾಸ ಸೂಚನೆ ನೀಡಬಹುದು. ನದಿಗಳ ಮಟ್ಟ ಏರಿಕೆಯಾಗುವುದು, ರಸ್ತೆಗಳಲ್ಲಿ ನೀರು ತುಂಬಿಕೊಳ್ಳುವುದು, ಜನವಸತಿ ಪ್ರದೇಶದಲ್ಲಿ ನೀರು ಹರಿಯುವುದು ಸೇರಿ ನೀವು ಬಹಳಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯತೆಯನ್ನು ಸೂಚಿಸಲಿದೆ. ಸಾರಿಗೆ ವ್ಯತ್ಯಯ, ವಿದ್ಯುತ್ ವ್ಯತ್ಯಯ , ಭೂ ಕುಸಿದಂತಹ ದುರಂತಗಳಿಗೆ ನೀವು ಸಿದ್ದರಿರಬೇಕು ಎಂಬುದನ್ನು ಸೂಚಿಸಲಿದೆ.
ರೆಡ್ ಅಲರ್ಟ್ (Red Alert): ಕೆಂಪು ಅಥವಾ ರೆಡ್ ಅಲರ್ಟ್ ಘೋಷಣೆಯಾದರೆ ಅನಿವಾರ್ಯವಾಗಿ ನೀವು ಸುರಕ್ಷಿತ ಸ್ಥಳದತ್ತ ತೆರಳಲು ಸಿದ್ಧರಾಗಬೇಕಾಗುತ್ತದೆ. ಏಕೆಂದರೆ ಕೇವಲ 24 ಗಂಟೆಯಲ್ಲಿ 204 ಮಿ.ಮೀ ಗಿಂತಲೂ ಹೆಚ್ಚಿನ ಮಳೆಯ ಸೂಚನೆ ಇದಾಗಿದೆ. ಇದು ನಿಮ್ಮ ಜೀವ, ಆಸ್ತಿ ಹಾನಿಯ ಮುನ್ಸೂಚನೆಯಾಗಿರಲಿದೆ. ಹೀಗಾಗಿ ರೆಡ್ ಅಲರ್ಟ್ ಇದ್ದಾಗ ಬಹಳಷ್ಟು ಎಚ್ಚರಿಕೆ ಅಗತ್ಯ. ಈ ಸಮಯದಲ್ಲಿ ಪ್ರಯಾಣ, ಪ್ರವಾಸ ತಪ್ಪಿಸಬೇಕು. ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿದೆ.






