ಕಾಸರಗೋಡು: ತುರ್ತು ಪರಿಸ್ಥಿತಿಯ ಕರಾಳತೆಯ ವಿರುದ್ಧದ ಹೋರಾಟದ ಬಗ್ಗೆ ಮುಂದಿನ ತಲೆಮಾರಿಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಬೇಕು ಎಂಬುದಾಗಿ ಗೋವಾ ರಾಜ್ಯಪಾಲ ವಕೀಲ ಪಿ.ಎಸ್ ಶ್ರೀಧರನ್ ಪಿಳ್ಳೆ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆ'ಸ್ಮøತಿ ಸಂಗಮ'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಮಸಿ ಬಳಿದಿದ್ದಾರೆ. ಈ ಕಳಂಕ ಎಂದಿಗೂ ಅಳಿಸಿಹೋಗಲು ಸಾಧ್ಯವಿಲ್ಲ. ದೇಶದ ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿರುವ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಆರೆಸ್ಸೆಸ್ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿರುವುದು ಇಂದು ಚರಿತ್ರೆಯಾಗಿದೆ. ಆದರೆ ಕೇರಳದ ಮುಖ್ಯಮಂತ್ರಿ ಆರೆಸ್ಸೆಸ್‍ನ ಹೋರಾಟದ ಬಗ್ಗೆ ಜನತೆಗೆ ಸುಳ್ಳು ಸಂದೇಶ ನೀಡುತ್ತಿದ್ದಾರೆ. ಸ್ವತ: ಪಿಣರಾಯಿ ವಿಜಯನ್ ಅವರೂ ತುರ್ತ ಪರಿಸ್ಥಿತಿಯ ಸಂದರ್ಭ ಜೈಲುವಾಸ ಅನುಭವಿಸಿದ್ದರೂ, ಕಾಂಗ್ರೆಸ್‍ನ ಪ್ರಭುತ್ವಕ್ಕೆ ತಲೆಬಾಗುತ್ತಾ ಬಂದಿದ್ದಾರೆ. ಎರಡನೇ ಸ್ವಾತಂತ್ರ್ಯ ಸಂಗ್ರಾಮವಾದ ತುರ್ತು ಪರಿಸ್ಥಿತಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ, ಗಾಂಧಿ ಕುಟುಂಬದ ಅಡಿಯಾಳುಗಳಂತೆ ವರ್ತಿಸಿದ್ದ ಕೇರಳದ ಇಂದಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚರಿತ್ರೆಯನ್ನು ತಿರುಚುತ್ತಿದ್ದಾರೆ ಎಂದು ತಿಳಿಸಿದರು.
ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಐಎಎಸ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕøತ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ದಿನೇಶ್ ಕಾಮತ್ ಪ್ರಧಾನ ಭಾಷಣ ಮಾಡಿದರು. ಆರ್. ಎಸ್. ಎಸ್. ಕಾಞಂಗಾಡು ಜಿಲ್ಲಾ ಸಂಘಚಾಲಕ ಕೆ. ದಾಮೋದರನ್ ಆರ್ಕಿಟೆಕ್ಟ್, ಆರೆಸ್ಸೆಸ್ ಕಾಸರಗೋಡು ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್ ಮಾಸ್ಟರ್, ವಿ. ರವೀಂದ್ರನ್ ಉಪಸ್ಥಿತರಿದ್ದರು. ಈ ಸಂದರ್ಭ 'ತುರ್ತು ಪರಿಸ್ಥಿತಿ- 50 ವರ್ಷಗಳ ಪ್ರಜಾಪ್ರಭುತ್ವದ ಹತ್ಯೆ' ಎಂಬ ಮಲಯಾಳ ಪುಸ್ತಕ ಹಾಗೂ ಅನುವಾದಿತ ಕನ್ನಡ ಪುಸ್ತಕವನ್ನು ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳ್ಳೆ ಬಿಡುಗಡೆಗೊಳಿಸಿದರು. ವಕೀಲ ಕರುಣಾಕರನ್ ನಂಬಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡು ಶಿಕ್ಷೆ ಅನುಭವಿಸಿರುವ ಹಲವು ಮಂದಿ ಹೋರಾಟಗಾರರು ಮಹಾಸಂಗಮದಲ್ಲಿ ಪಾಲ್ಗೊಂಡಿದ್ದರು. 1975ರ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವ ಸಂರಕ್ಷಣಾ ಹೋರಾಟ ಸ್ಮರಣ ಸಮಿತಿ ಕಾಸರಗೋಡು ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

