ಮಂಜೇಶ್ವರ: ಹತ್ತು ವರ್ಷಗಳಿಗೂ ಹೆಚ್ಚು ಕಾಲ ಉಪ್ಪಳ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜೇಶ್ವ ತಾಲ್ಲೂಕು ಕಚೇರಿಗೆ ಹೊಸ ಕಟ್ಟಡ ನಿರ್ಮಿಸುವಂತೆ ಕೇರಳ ಎನ್ ಜಿ ಓ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎ.ಟಿ. ಶಶಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಂಜೇಶ್ವರ ತಾಲ್ಲೂಕು ಕಚೇರಿಯ ಶಿಥಿಲಾವಸ್ಥೆಯನ್ನು ಪರಿಹರಿಸುವಂತೆ ಆಗ್ರಹಿಸಿ ಅಸೋಸಿಯೇಷನ್ ಮಂಜೇಶ್ವರ ಶಾಖೆ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.. 60ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ªನಿರ್ವಹಿಸುವ ತಾಲ್ಲೂಕು ಆಡಳಿತ ಕೇಂದ್ರದಲ್ಲಿ ನೀರು ಮತ್ತು ವಿದ್ಯುತ್ ಕೊರತೆ ಅನುಭವಿಸಬೇಕಾಗುತ್ತಿದೆ. ಎಲ್ಲಾ ಕಚೇರಿ ಕೆಲಸಗಳು ಡಿಜಿಟಲ್ ಆಗಿರುವ ಯುಗದಲ್ಲಿ ಪ್ರಸಕ್ತ ಕಚೇರಿಯಲ್ಲಿ ಇಂಟರ್ನೆಟ್ ಸಹ ಲಭ್ಯವಿಲ್ಲ. ತನ್ನ ವ್ಯಾಪ್ತಿಯಲ್ಲಿರುವ 8 ಪಂಚಾಯತ್‍ಗಳನ್ನು ಒಳಗೊಂಡಿರುವ ತಾಲ್ಲೂಕು ಕಚೇರಿಯು ಕೇವಲ ಒಂದು ವಾಹನವನ್ನು ಹೊಂದಿದೆ. ಮೂರನೇ ಮಹಡಿಯಲ್ಲಿರುವ ಕಚೇರಿಗೆ ಪ್ರವೇಶಿಸಲು ರ್ಯಾಂಪ್ ಇಲ್ಲದಿರುವುದು ಅಂಗವಿಕಲರು ಮತ್ತು ವೃದ್ಧರಿಗೆ ತೆರಳಲು ಕಷ್ಟಕರವಾಗಿದೆ. ವಿದ್ಯುತ್ ಕೊರತೆಯಿಂದಾಗಿ ಅನೇಕ ವ್ಯವಹಾರಗಳು ಮೊಟಕುಗೊಳ್ಳುವಂತಾಗಿದೆ. ವಾಣಿಜ್ಯಸಂಕೀರ್ಣದಲ್ಲಿ ವಿದ್ಯುತ್ ಸ್ಥಗಿತಗೊಂಡರೆ, ಏಕಕಾಲದಲ್ಲಿ ಜನರೇಟರ್‍ಗಳನ್ನು ಚಾಲನೆ ಮಾಡುತ್ತಿರುವ ಕಾರಣ, ವ್ಯಾಪಕ ಹೊಗೆಯಿಂದ ಉಸಿರಾಟ ತೊಂದರೆಯನ್ನು ನೌಕರರು ಅನುಭವಿಸಬೇಕಾಗುತ್ತಿದೆ. ಇನ್ನು ಕಚೇರಿ ಆವರಣವು ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.
ಮಂಜೇಶ್ವರ , ಉಪ್ಪಳ ಪ್ರದೇಶಗಳಲ್ಲಿ ಸೂಕ್ತ ಸ್ಥಳವಿದ್ದರೂ, ಇನ್ನೂ ಸ್ವಂತ ಕಟ್ಟಡ ನಿರ್ಮಾಣವಾಗದಿರುವುದು ವಿಷಾದನೀಯ. ತಾಲೂಕು ಕಚೇರಿ ಆರಂಭಗೊಂಡು ಹತ್ತು ವರ್ಷ ಸಂದರೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ರಾಜಕೀಯ ಪಕ್ಷಗಳು ಮುಂದಾಗದಿರುವುದು ದುರಾದೃಷ್ಟಕರ. ವೆಳರಿಕುಂಡು ಮತ್ತು ಮಂಜೇಶ್ವರ ತಾಲೂಕು ಕಚೇರಿ ಒಂದೇ ವರ್ಷದಲ್ಲಿ ಮಂಜೂರಾದರೂ ವೆಳರಿಕುಂಡು ತಾಲೂಕು ಕಚೇರಿಗೆ ನೂತನ ಕಟ್ಟಡ ನಿರ್ಮಾಣಗೊಂಡು ವರ್ಷಗಳೇ ಸಂದಿವೆ. ಎಲ್ಲದಕ್ಕೂ ಸರ್ಕಾರವನ್ನು ಕಣ್ಣು ಮುಚ್ಚಿ ಬೆಂಬಲಿಸುವ ಎಡರಂಗ ನೌಕರ ಸಂಘಟನೆಗಳು ಮೌನಪಾಲಿಸಿರುವುದು ಖಂಡನೀಯ. ನೌಕರರು ಅಂಧಾನುಕರಣೆಯ ರಾಜಕೀಯವನ್ನು ಬಿಟ್ಟು ಪ್ರತಿಭಟನೆಗೆ ಮುಂದಾಗಬೇಕು ಎಂದು ರಾಜ್ಯ ಸಮಿತಿ ಸದಸ್ಯ ಲೋಕೇಶ್ ಎಂ.ಬಿ ಆಚಾರ್ ಕಂಬಾರು ತಿಳಿಸಿದರು.
ಉಪಾಧ್ಯಕ್ಷ ಒ ಡಿ ಜಯನ್ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಷನ್ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ ಸಿ ಸುಜಿತ್ ಕುಮಾರ್, ಜಾಯ್ ಫ್ರಾನ್ಸಿಸ್ ಕೆ ಅಬ್ದುಲ್ ಕರೀಮ್, ಜಿಲ್ಲಾ ಖಜಾಂಚಿ ವಿ ಎಂ ರಾಜೇಶ್, ಗುರುರಾಜ್ ಮಾವುಂಗಲ್, ಕೆ ಆರ್ ಪ್ರಮೋದ್, ಆರ್ ರಾಜೇಶ್, ಕೆ ಇಂದಿರಾ, ಸಿ ಚಾಂದನಿ, ಮುಹಮ್ಮದ್ ಹ್ಯಾರಿಸ್ ಧರಣಿ ನೇತೃತ್ವ ವಹಿಸಿದ್ದರು.


