ಬದಿಯಡ್ಕ: ಬದಿಯಡ್ಕ ಪೇಟೆಯ ವಾರದ ಸಂತೆಯಲ್ಲಿ ಮಾವಿನಹಣ್ಣಿನದ್ದೇ ಕಾರುಬಾರು. ವಿಪರೀತ ಮಳೆಯ ಮಧ್ಯೆ ಮಾವಿನಹಣ್ಣುಗಳ ರಾಶಿಯೇ ಕಂಡುಬಂದರೂ ಖರೀದಿಗೆ ಗ್ರಾಹಕರ ಕೊರತೆ ಎದ್ದುಕಾಣುತ್ತಿತ್ತು. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ವಿವಿಧ ಜಾತಿಯ ಮಾವಿನಹಣ್ಣುಗಳು ಶನಿವಾರದ ಸಂತೆಯಲ್ಲಿ ವ್ಯಾಪಾರಿಗಳು ಅಧಿಕ ಪ್ರಮಾಣದಲ್ಲಿ ಮಾರಾಟಕ್ಕೆ ಇರಿಸಿದ್ದರು. ಕಿಲೋ ಒಂದಕ್ಕೆ 50 ರೂಪಾಯಿಯಂತೆ ಮಾವಿನಹಣ್ಣು, ಕಾಯಿಗಳು ಲಧ್ಯವಿದ್ದರೂ ಖರೀದಿಗೆ ಜನರ ಕೊರತೆಯಿತ್ತು. ಜೊತೆಗೆ ಬೇರೆ ಬೇರೆ ಜಾತಿಯ ಹಣ್ಣುಗಳೂ ಮಾರುಕಟ್ಟೆಯಲ್ಲಿತ್ತು. ಸೊಪ್ಪು ತರಕಾರಿಗಳು, ಬೀನ್ಸ್, ತೊಂಡೆ, ಬೀಟ್‍ರೋಟ್, ಚೀನಿಕಾಯಿ, ಹೀರೆಕಾಯಿ, ಸಿಹಿಗೆಣಸು ಹಾಗೂ ಇನ್ನಿತರ ತರಕಾರಿಗಳಿಗೂ ಬೇಡಿಕೆಯಿರಲಿಲ್ಲ. ರೆಡ್ ಅಲರ್ಟ್‍ನಿಂದ ಬೆದರಿದ ಜನತೆ ಮನೆಯಿಂದ ಹೊರಬರಲು ಹಿಂದೇಟು ಹಾಕಿದ್ದರು. ಸಂಜೆ 4 ಗಂಟೆಯಿಂದ 7 ಗಂಟೆ ತನಕ ವ್ಯಾಪಾರಿಗಳಿಗೆ ಸಣ್ಣ ಮಟ್ಟಿನ ವ್ಯಾಪಾರವಾಗಿತ್ತು.
ಜಿಲ್ಲೆಗೆ ರೆಡ್ ಅಲರ್ಟ್ :
ಕೇರಳ ರಾಜ್ಯದ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡು, ವಯನಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯನ್ನು ಮಾಡಿದೆ. ಶನಿವಾರ, ಹಾಗೂ ಭಾನುವಾರ ಹಾಗೂ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸೋಮವಾರವೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜಿಲ್ಲೆಗೆ ಸೋಮವಾರವೂ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಚಾಲಕರ ಸಂಕಷ್ಟ :
ಸಂತೆಯ ದಿನ ವಿವಿಧ ಕಡೆಗಳಿಂದ ನಿತ್ಯ ಆಗಮಿಸುವ ಬಸ್‍ಗಳು ತಂಗುದಾಣಕ್ಕೆ ತೆರಳಲು ಕಷ್ಟಪಡುವಂತಾಗಿದೆ. ಮುಳ್ಳೇರಿಯ ಕುಂಬಳೆ ರಸ್ತೆಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಬದಿಯಡ್ಕ ಬಸ್ಸು ನಿಲ್ದಾಣಕ್ಕೆ ಬರಲು ಸಂತೆಯ ಪಕ್ಕದಲ್ಲಿಯೇ ತಿರುಗಿ ಬರಬೇಕಾಗಿದೆ. ಅಲ್ಲಿ ವ್ಯಾಪಾರಿಗಳ ಸ್ಟಾಲ್‍ಗಳು, ಗ್ರಾಹಕರ ವಾಹನಗಳ ಸಾಲುಗಳು ಇರುವುದರಿಂದ ಬಸ್‍ಗಳು ತಿರುಗಿ ಹೋಗಲು ಕಷ್ಟಪಡಬೇಕಾಗಿದೆ. ಹಿಂದೆಯೂ ಮುಂದೆಯೂ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವುಂಟಾಗುವ ಪರಿಸ್ಥಿತಿಯಿದೆ. ರಸ್ತೆ ಅಭಿವೃದ್ಧಿಯ ನಂತರ ಪ್ರತೀ ಶನಿವಾರದಂದು ಚಾಲಕರ ಸಂಕಷ್ಟ ಹೇಳತೀರದಾಗಿದೆ.




.jpg)
.jpg)
