ಕಾಸರಗೋಡು : ಸರಳ ಸಂಕೀರ್ತನೆಯ ಭಕ್ತಿ ಮಾರ್ಗ ಎಂದರೆ ಭಜನೆ. ಭಜಕನ ಪಾರಮಾರ್ಥಿಕ ಭಕ್ತಿಗೆ ದೇವರು ಒಲಿದ ಹಲವಾರು ನಿದರ್ಶನಗಳಿದ್ದು ಪ್ರತಿಯೊಂದು ಮನೆಯಲ್ಲೂ ಪ್ರತಿಯೊಬ್ಬರ ಮನದಲ್ಲೂ ಭಜನೆ ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಹಾದಿಯಾಗಬಲ್ಲುದು ಎಂದು ಎಡನೀರು ಶ್ರೀಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಅವರು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಲ್ಲಿ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ನೇತೃತ್ವದಲ್ಲಿ ನಡೆದ ಏಕ ದಿನ ಭಜನಾ ಕಮ್ಮಟವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು.
ಪರಿಷತ್ತಿನ ಅಧ್ಯಕ್ಷರಾದ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಧಾರ್ಮಿಕ ಮುಂದಾಳು ಡಾ.ಅನಂತ ಕಾಮತ್, ವಿಶ್ವಹಿಂದು ಪರಿಷತ್ ನಗರ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ, ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ನ್ಯಾಯವಾದಿ ಗೋವಿಂದ ನಾಯರ್, ಕನ್ನಡ ಭವನದ ರೂವಾರಿ ವಾಮನ ರಾವ್ ಬೇಕಲ್, ಸೇವಾ ಭಾರತೀ ಕನ್ಯಾಡಿ ಧರ್ಮಸ್ಥಳ ಅಧ್ಯಕ್ಷೆ ಸ್ವರ್ಣಗಿರಿ ಶುಭಾಶಂಸನೆಗೈದರು. ಪೇಟೆ ವೆಂಕಟ್ರಮಣ ದೇವಸ್ಥಾನ ಉಪಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ ಪ್ರಾರ್ಥನೆಗೈದರು. ಭಜನಾ ಪರಿಷತ್ ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ ಸ್ವಾಗತಿಸಿ ಕಾರ್ಯದರ್ಶಿ ರೋಹಿತ್ ಆಚಾರ್ಯ ಮಧೂರು ವಂದಿಸಿದರು. ಭಜನಾ ಪರಿಷತ್ ಮಂಜೇಶ್ವರತ ತಾಲೂಕು ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ ನಿರೂಪಿಸಿದರು.





