ಕಾಸರಗೋಡು: ಬಿರುಸಿನ ಮಳೆಗೆ ಚೆರ್ಕಳ ಸನಿಹ ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣದ ಸಂದರ್ಭ ಭೂಕುಸಿತದಿಂದಾಗಿ ಸಂಚಾರ ನಿಷೇಧಿಸಲಾಗಿದ್ದ ಬೇವಿಂಜೆಯಲ್ಲಿ ಪಾಶ್ರ್ವಭಿತ್ತಿ ಹಾಗೂ ರಕ್ಷಣಾ ತಡೆಗೋಡೆ ನಿರ್ಮಾಣ ಕಾರ್ಯವನ್ನು ತಕ್ಷಣ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಐಎಎಸ್ ಅವರು ನಿರ್ಮಾಣ ಕಂಪನಿಗೆ ಆದೇಶಿಸಿದ್ದಾರೆ.
ಭಾರೀ ಭೂಕುಸಿತದಿಂದ ಹಾನಿಗೀಡಾಗಿರುವ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಯ ಅವಲೋಕನ ನಡೆಸಲು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ, ಕಂಪೆನಿಗೆ ಈ ಸೂಚನೆ ನೀಡಿದ್ದಾರೆ.
ರಕ್ಷಣಾ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ನಾಲ್ಕು ದಿನಗಳು ಬೇಕಾಗಿಬರಬಹುದು ಎಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವರದಿ ಸ್ವೀಕರಿಸಿದ ನಂತರ, ಬೇವಿಂಜ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಪುನರಾರಂಭಿಸಲು ಸಾಧ್ಯವಾಗಲಿದ್ದು, ಕಾಮಗಾರಿ ಇನ್ನೂ ನಾಲ್ಕೈದು ದಿವಸಗಳಲ್ಲಿ ಪೂರ್ತಿಯಾಗಲಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.





