ಟೆಹರಾನ್: ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ತೈಲ ಸರಬರಾಜಿಗೆ ಪ್ರಮುಖ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ ಸಂಸತ್ತು ಅನುಮೋದನೆ ನೀಡಿದೆ.
ಈ ಜಲಸಂಧಿಯು ಇರಾನ್, ಇರಾಕ್, ಒಮನ್, ಕುವೈತ್, ಕತಾರ್, ಯುಎಇಗೆ ಹೊಂದಿಕೊಂಡಿದೆ. ವಿಶ್ವದ ಐದನೇ ಒಂದರಷ್ಟು ತೈಲ ಈ ಮಾರ್ಗವಾಗಿಯೇ ಸರಬರಾಜಾಗುತ್ತದೆ.
ಭಾರತಕ್ಕೆ ಆಮದಾಗುವ ಕಚ್ಚಾತೈಲದಲ್ಲಿ ಶೇ 40ರಷ್ಟು ಹಾಗೂ ಅರ್ಧದಷ್ಟು ಅನಿಲ ಇಂಧನ, ಕಿರಿದಾದ ಈ ಮಾರ್ಗದ ಮೂಲಕವೇ ಬರುತ್ತದೆ.
ಇರಾನ್ - ಇಸ್ರೇಲ್ ಸಂಘರ್ಷದಲ್ಲಿ ಅಮೆರಿಕ ಮಧ್ಯಪ್ರವೇಶಿಸಿರುವುದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ, ಇರಾನ್ ಸಂಸತ್ತು ಹೋರ್ಮುಜ್ ಜಲಸಂಧಿ ಮುಚ್ಚಲು ಅನುಮೋದನೆ ನೀಡಿದೆ. ಉನ್ನತ ಭದ್ರತಾ ಮಂಡಳಿಯು ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಇಸ್ರೇಲ್ ಪಡೆಗಳು ಇರಾನ್‌ನ ಸೇನಾ ನೆಲೆಗಳು, ಪರಮಾಣು ಘಟಕಗಳ ಮೇಲೆ ಜೂನ್ 13ರಂದು ದಾಳಿ ನಡೆಸಿದ್ದರಿಂದ, ಸಂಘರ್ಷ ಆರಂಭವಾಗಿತ್ತು. ಆಗಲೇ, ಹೋರ್ಮುಜ್ ಮುಚ್ಚುವ ನಿರ್ಧಾರವನ್ನು ಇರಾನ್ ಕೈಗೊಳ್ಳಬಹುದು ಎನ್ನಲಾಗಿತ್ತು. ಇದೀಗ (ಶನಿವಾರ ತಡರಾತ್ರಿ), ಅಮೆರಿಕ ಪಡೆಗಳು ಮೂರು ಪ್ರಮುಖ ಪರಮಾಣು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಹೀಗಾಗಿ, ಇರಾನ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಹೋರ್ಮುಜ್ ಜಲಸಂಧಿ ಮುಚ್ಚುವಿಕೆ ನಿರ್ಧಾರದಿಂದ ತೈಲ ಸರಬರಾಜಿನ ಮೇಲೆ ಪರಿಣಾಮ ಉಂಟಾಗಲಿದ್ದು, ಇಂಧನ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

