ಸೊಲ್ಲಾಪುರ: ಮಹಾರಾಷ್ಟ್ರದಲ್ಲಿ 'ಅರಣ್ಯ ಋಷಿ' ಎಂದೇ ಹೆಸರಾಗಿದ್ದ ಮಾರುತಿ ಚಿತಂಪಲ್ಲಿ (93) ಬುಧವಾರ ನಿಧನರಾದರು.
ವನ್ಯಜೀವಿ ಸಂರಕ್ಷಣೆ, ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿನ ಕೆಲಸಕ್ಕಾಗಿ ಈ ವರ್ಷ 'ಪದ್ಮಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದರು.
ವಿದರ್ಭ ವಲಯದಲ್ಲಿ ದೀರ್ಘ ಕಾಲ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆಲಸ ಮಾಡಿದ್ದರು.
ನವೇಂಗಾಂವ್ ರಾಷ್ಟ್ರೀಯ ಉದ್ಯಾನದಲ್ಲಿನ ಕೆಲಸದ ಅವಧಿಯು, ಇವರ ಭವಿಷ್ಯದ ಬದುಕಿಗೊಂದು ರೂಪುಕೊಟ್ಟಿತ್ತು.
1981ರಲ್ಲಿ 'ಪಕ್ಷಿ ಜಾಯ ದಿಗಂತರಾ' ಪುಸ್ತಕದ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದರು. ಮೊದಲ ಪುಸ್ತಕವೇ ಅಪಾರ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಪಕ್ಷಿ ಕೋಶ, ಪ್ರಾಣಿ ಕೋಶ, ವೃಕ್ಷ ಕೋಶ ನಿಘಂಟುಗಳನ್ನು ರಚಿಸಿದ್ದಾರೆ. ಇವು ನಿಸರ್ಗ ಪ್ರೇಮಿಗಳು ಹಾಗೂ ಅರಣ್ಯ ಕುರಿತ ಸಂಶೋಧಕರಿಗೆ ಮಾರ್ಗದರ್ಶಕವಾಗಿವೆ.
ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ 1990ರಲ್ಲಿ ನಿವೃತ್ತರಾದ ನಂತರ ಅರಣ್ಯದ ಮಹತ್ವವನ್ನು ಹಾಗೂ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು.




