ಕಾಸರಗೋಡು: ಸಂತಾನೋತ್ಪತ್ತಿಗಾಗಿ ಬರುವ ಮೀನುಗಳ ಸುಗಮ ಸಂಚಾರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿದ್ದು, ನಿಷೇಧ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕೇರಳಾದ್ಯಂತ ಟ್ರಾಲಿಂಗ್ ನಿಷೇಧ ಜೂನ್ 9 ರ ಮಧ್ಯರಾತ್ರಿಯಿಂದ ಪ್ರಾರಂಭಗೊಂಡು ಜುಲೈ 31ರ ವರೆಗೆ ಜಾರಿಯಲ್ಲಿರಲಿದೆ. ಈ ಕಾಲಾವಧಿಯಲ್ಲಿ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುವುದು ಮೀನಿನ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆ ಮೂಲಕ ಮೀನು ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆಯಿದೆ. ಮೀನುಗಳ ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲಾವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕಾದರೆ, ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರವೂ ಅಗತ್ಯ. ಈ ಕಲಾವಧಿಯಲ್ಲಿ ಅನಧಿಕೃತ ಮೀನುಗಾರಿಕೆ ಕಂಡುಬಂದರೆ, 2010 ರ ಒಳನಾಡು ಜಲಚರ ಸಾಕಣೆ ಮತ್ತು ಮೀನುಗಾರಿಕೆ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಮತ್ತು ದಂಡ ವಿಧಿಸಲಾಗುವುದು. ಈ ಬಗ್ಗೆ ದೂರುಗಳನ್ನು ಜಿಲ್ಲಾ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ(04672 202537)ಗೆ ತಿಳಿಸುವಂತೆ ಕಾಸರಗೋಡು ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.






