ಮಂಜೇಶ್ವರ : ಮೀಂಜ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಜಿಬೈಲ್ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಅಪಾರ ಜಲ ಪ್ರವಾಹ ಸಂಭವಿಸಿದ ಪರಿಣಾಮ, ಗ್ರಾಮದಲ್ಲಿನ ತೋಡಿನ ಸೈಡ್ ಬಂಡ್ ಕಟ್ಟ ಒಡೆದು ದೊಡ್ಡ ನೀರಿನ ಹರಿವು ಬಂದು 75 ಹೆಕ್ಟರ್ ಭತ್ತದ ಕೃಷಿ ಭೂಮಿ ಸಂಪೂರ್ಣ ನಾಶವಾಗುವುದರ ಜೊತೆಗೆ ತೋಡಿನ ಬದಿಯ ಸುಮಾರು 150 ಕುಟುಂಬಗಳು ಸಂಚರಿಸಲು ನಿರ್ಮಾಣ ಮಾಡಲಾಗಿದ್ದ ರಸ್ತೆಯಲ್ಲಿ ನಿಲುಗಡೆಗೊಂಡ ಕಾರುಗಳು ಸೇರಿದಂತೆ ಹಲವು ವಾಹನಗಳು ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು.
ಇದರಿಂದ ಈ ಪ್ರದೇಶದ ಅನೇಕ ಕೃಷಿಕರು ಹಾಗೂ ಕುಟುಂಬಗಳು ಆಸ್ತಿ ನಷ್ಟವನ್ನು ಅನುಭವಿಸಬೇಕಾಗಿ ಬಂದಿತ್ತು. ಆದರೆ ಇಲ್ಲಿಯ ಕೃಷಿಕರು ಸರ್ಕಾರದ ಸಹಾಯ ಲಭಿಸಲು ವಿಳಂಬವಾಗುವ ಸಾಧ್ಯತೆ ಮನಗಂಡು ಕೃಷಿಕರೇ ಮುಂದೆ ಬಂದು ಗ್ರಾಮಸ್ಕರ ನೆರವನ್ನು ಒಟ್ಟುಗೂಡಿಸಿ ತಾತ್ಕಾಲಿಕ ರಕ್ಷಣೆಯ ಉದ್ದೇಶದಿಂದ ಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚಿನಲ್ಲಿ ತೋಡಿಗೆ ತಾತ್ಕಾಲಿಕ ಕಟ್ಟವನ್ನು ಕಟ್ಟಿ ಅಪಾಯದಿಂದ ರಕ್ಷಣೆ ನೀಡಿ ಮಾದರಿಯಾಗಿದ್ದಾರೆ.
ಗ್ರಾಮಸ್ಥರು ಸಂಗ್ರಹಿಸಿದ ಹಣ ಮತ್ತು ಸಾಮಗ್ರಿಗಳನ್ನು ಉಪಯೋಗಿಸಿ, ಪ್ರಸ್ತುತ ಅವಶ್ಯಕವಾದ ನೀರಿನ ಹರಿವು ಮುಚ್ಚಲು ತೋಡಿಗೆ ಸಾಮಗ್ರಿಗಳಿಂದ ತಾತ್ಕಾಲಿಕ ಕಟ್ಟ ಕಟ್ಟಿ ಅಪಾಯವನ್ನು ಕಡಿಮೆ ಮಾಡಲಾಗಿದೆ. ಭತ್ತದ ಕೃಷಿ ಭೂಮಿಯನ್ನು ಸಂರಕ್ಷಿಸಲು ಕೈಗಾರಿಕೆ ಹಾಗೂ ತಾತ್ಕಾಲಿಕ ಕೃಷಿ ಉಪಕರಣಗಳಿಗೆ ಸ್ಥಳೀಯ ನೇತಾರರ ಮೂಲಕ ಒತ್ತಾಯ ಹೇರಲಾಗಿದೆ.
ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಅಗತ್ಯವಿರುವ ಹೂಡಿಕೆಯನ್ನು ಸರ್ಕಾರದಿಂದ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಂದ ಒತ್ತಾಯಿಸಲಾಗುವುದಾಗಿಯೂ ಭತ್ತದ ಕೃಷಿ ಭೂಮಿಯಲ್ಲಿ ಶೇಖರಣೆಯಾಗಿರುವ ಮರಳನ್ನು ತೆರವುಗೊಳಿಸಲು ಕೃಷಿ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದೂ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ (ಎಂ) ಹಿರಿಯ ನೇತಾರ ಕೆ.ಆರ್, ಜಯಾನಂದ ಹಾಗೂ ಸಿಪಿಐ ನೇತಾರ ಜಯರಾಂ ಬಳ್ಳಂಗುಡೇಲ್ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಇಂತಹ ದುರ್ಘಟನೆಗಳನ್ನು ತಪ್ಪಿಸಲು ಸರಿಯಾದ ತೋಡಿನ ವಿನ್ಯಾಸವನ್ನು ರೂಪಿಸಿ, ಇತರ ಪ್ರದೇಶಗಳಲ್ಲಿ ಪ್ರಭಾವ ಬೀರುವುದನ್ನು ತಪ್ಪಿಸಲು ಸ್ಥಳೀಯಾಡಳಿತ ಅಧಿಕಾರಸ್ಥರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಶಾಶ್ವತ ನೀರಿನ ಹರಿವು ತಡೆಗಟ್ಟಲು ಮುಂಚಿತವಾಗಿ ತಡೆಗಳು ನಿರ್ಮಿಸಬೇಕಾಗಿದೆ.
ಭತ್ತದ ಬೆಳೆ ನಷ್ಟವನ್ನು ಅನುಭವಿಸಿದ ಕೃಷಿಕರಿಗೆ ನಗದು ಸಹಾಯ, ಕೃಷಿ ಸಾಧನಗಳು ಹಾಗೂ ಹಣಕಾಸು ಸಹಾಯವನ್ನು ನೀಡುವ ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಸ್ಥರು ಕೂಡಲೇ ಒದಗಿಸಿಕೊಡಬೇಕಾಗಿದೆ.
ಪ್ರಸ್ತುತ ಮಜಿಬೈಲ್ ನಲ್ಲಿ ಸಂಭವಿಸಿದ ನೈಸರ್ಗಿಕ ದುರ್ಘಟನೆಗೆ ತಾತ್ಕಾಲಿಕ ಪರಿಹಾರವನ್ನು ಗ್ರಾಮಸ್ಥರು ಪೂರೈಸಿದರೂ, ಶಾಶ್ವತ ಪರಿಹಾರಕ್ಕೆ ಸಾರ್ವಜನಿಕ ವ್ಯವಸ್ಥೆ ಹಾಗೂ ಸ್ಥಳೀಯಾಡಳಿತವು ಮುನ್ನಡೆಸುವ ಕ್ರಿಯಾಶೀಲತೆ ಮುಖ್ಯವಾಗಿದೆ. ಗ್ರಾಮಸ್ಥರ ಭದ್ರತೆ ಮತ್ತು ಕೃಷಿಕರ ನಷ್ಟ ತಪ್ಪಿಸಲು ಸೂಕ್ತ ಕ್ರಮಗಳು ಕೈಗೊಳ್ಳಬೇಕಾದದ್ದು ಅನಿವಾರ್ಯ.

.jpg)
