ಬದಿಯಡ್ಕ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಆಂಬುಲೆನ್ಸ್‍ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಕನ್ಯಪ್ಪಾಡಿ ಬಾಪಾಲಿಪನೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಶಿವರಾಮ ಎಂಬವರ ಪತ್ನಿ ಸುಮಿತ್ರಾ(25)ಗಂಡುಮಗುವಿಗೆ ಜನ್ಮ ನೀಡಿದವರು. ಬಾಣಂತಿ ಮತ್ತು ಮಗು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದ ಸುಮಿತ್ರಾ ಅವರನ್ನು ಬದಿಯಡ್ಕ ಠಾಣೆ ಎಎಸ್‍ಐ ಸುಕುಮಾರನ್ ಮತ್ತು ತಂಡ ಕನ್ಯಪ್ಪಾಡಿ ವರೆಗೆ ಕರೆತಂದಿದ್ದರು. ನಂತರ ಬಿಜೆಪಿ ಮುಖಂಡ ಅವಿನಾಶ್ ರೈ ಅವರಿಗೆ ನೀಡಿದ ಮಾಹಿತಿಯನ್ವಯ ಸ್ನೇಹಿತ ರಂಜಿತ್ ಜತೆ ಆಂಬುಲೆನ್ಸ್‍ನಲ್ಲಿ ತೆರಳಿ, ಅಲ್ಲಿಂದ ಕಾಸರಗೋಡಿಗೆ ಕರೆದೊಯ್ಯುವ ಹಾದಿ ಮಧ್ಯೆ ಮಧೂರು ಸನಿಹ ಅಟಲ್‍ಜಿ ಆಂಬುಲೆನ್ಸ್ ವಾಹನದಲ್ಲೇ ಮಹಿಳೆಗೆ ಹೆರಿಗೆಯಾಗಿದೆ. ನಂತರ ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದ್ದು, ಬಾಣಂತಿ, ಮಗು ಆರೋಗ್ಯವಂತರಾಗಿರುವುದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.




