ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಜಿಲ್ಲೆಯ ವೀರಮಲ ಬೆಟ್ಟದಲ್ಲಿ ಭೂಕುಸಿತದ ಪರಿಣಾಮ ಉಂಟಾಗಿರುವ ಬಿರುಕುಗಳ ಬಗ್ಗೆ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದಲ್ಲಿ ವೀರಮಲ ಬೆಟ್ಟದಲ್ಲಿ ಡ್ರೋನ್ ಸಮೀಕ್ಷೆ ನಡೆಸಲಾಯಿತು.
ವೀರಮಲೆ ಗುಡ್ಡದಲ್ಲಿ ಲಂಬ ಮತ್ತು ಅಡ್ಡವಾಗಿ ಹಲವು ಬಿರುಕುಗಳು ಕಂಡುಬಂದಿದ್ದು, ಈ ಬಗ್ಗೆ ತಹಸೀಲ್ದಾರ್ ವಿವರವಾದ ವರದಿಯನ್ನು ಸಲ್ಲಿಸಲಿದ್ದಾರೆ. ವರದಿಯನ್ನು ಸ್ವೀಕರಿಸಿದ ನಂತರ ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗುವುದು. ವರದಿಯ ಆಧಾರದಲ್ಲಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಕೋರಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ಹೊಸದುರ್ಗ ತಹಸೀಲ್ದಾರ್ ಟಿ.ಜಯಪ್ರಸಾದ್, ವಿಪತ್ತು ನಿರ್ವಹಣಾ ಇಲಾಖೆ ಉಪ ತಹಸೀಲ್ದಾರ್ ಪಿ.ವಿ. ತುಳಸಿರಾಜ್, ವಿಪತ್ತು ವಿಶ್ಲೇಷಕಿ ಪಿ.ಶಿಲ್ಪಾ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಧಿಕಾರಿ ಜತೆಗಿದ್ದರು. ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮಟ್ಟಲಾಯಿ ಗುಡ್ಡೆ ಮತ್ತು ಚೆರ್ಕಳ ಸನಿಹದ ಬೇವಿಂಜ ಪ್ರದೇಶದಲ್ಲೂ ಡ್ರೋಣ್ ಸಮೀಕ್ಷೆ ನಡೆಸಲು ತೀರ್ಮಾನಿಸಲಾಯಿತು.





