ತಿರುವನಂತಪುರಂ: ಕೇರಳದಲ್ಲಿ ಗುರುವಾರ ಧಾರಾಕಾರ ಮಳೆ ಮುಂದುವರಿದಿದ್ದು, ಎರ್ನಾಕುಲಂ, ಇಡುಕ್ಕಿ ಹಾಗೂ ತ್ರಿಶ್ಶೂರ್ ಜಿಲ್ಲೆಯ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ರಾಜ್ಯದ ಮೂರು ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಿದೆ.
ಭಾರಿ ಮಳೆ ಹಾಗೂ ಬಿರುಸಾದ ಗಾಳಿಯಿಂದ ರಾಜಧಾನಿ ತಿರುವನಂತಪುರ ಸೇರಿದಂತೆ ಕೇರಳದ ಹಲವು ಜಿಲ್ಲೆಗಳಲ್ಲಿ ಮರ, ವಿದ್ಯುತ್ ಕಂಬಗಳು ಬುಡಸಮೇತ ಉರುಳಿಬಿದ್ದಿವೆ. ಹಲವೆಡೆ ಹೋರ್ಡಿಂಗ್‌ಗಳು ಕೆಳಗುರುಳಿವೆ.
ಇಡುಕ್ಕಿ, ಮಲಪ್ಪುರಂ, ವಯನಾಡ್ ಜಿಲ್ಲೆಗಳಿಗೆ ಐಎಂಡಿಯು 'ರೆಡ್ ಅಲರ್ಟ್' ಘೋಷಿಸಿದ್ದು, ಉಳಿದ ಏಳು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ.
ಭಾರಿ ಮಳೆಯಿಂದ ಈ ವಾರ ನದಿಗಳು ಉಕ್ಕಿ ಹರಿಯಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ರಾಜ್ಯ ನೀರಾವರಿ ಇಲಾಖೆಯು ಎಚ್ಚರಿಕೆ ಸಂದೇಶ ರವಾನಿಸಿದೆ. ಎರ್ನಾಕುಲಂನ ಮೂವಟ್ಟುಪುಳ, ತ್ರಿಶ್ಶೂರ್, ಮಲಪ್ಪುರಂನಲ್ಲಿ ಹರಿಯುವ ಭರತ್‌ಪುಳ, ಪತ್ತನಂತಿಟ್ಟ ಜಿಲ್ಲೆಯ ಪಂಪಾ ನದಿ, ಕೊಟ್ಟಾಯಂನ ಮಣಿಮಲ, ಇಡುಕ್ಕಿಯ ತೋಡುಪುಳ, ವಯನಾಡ್‌ನ ಕಬಿನಿ ನದಿ ತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಸೂಚನೆ ನೀಡಿದೆ.
ಮಳೆಯಿಂದ ಎರ್ನಾಕುಲಂ, ತ್ರಿಶ್ಶೂರ್, ಇಡುಕ್ಕಿ ಜಿಲ್ಲೆಯ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ನೂರಾರು ಮಂದಿಯನ್ನು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕಳೆದ ವರ್ಷ ಮಳೆಯಿಂದ ಭೀಕರ ಭೂಕುಸಿತಕ್ಕೆ ಸಾಕ್ಷಿಯಾಗಿದ್ದ ಮುಂಡಕ್ಕೈ ಮತ್ತು ಚೂರಲ್‌ಮಲ ಭಾಗದಲ್ಲಿ ನದಿಯು ಉಕ್ಕಿ ಹರಿಯುತ್ತಿದ್ದು, ಕೆಸರು ಹರಿದುಬರುತ್ತಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.




