HEALTH TIPS

ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆ: ಜಂಟಿ ಹೇಳಿಕೆಗೆ ಸಹಿ ಹಾಕದ ಭಾರತ

ಬೀಜಿಂಗ್‌/ನವದೆಹಲಿ: ಪಾಕಿಸ್ತಾನ ಬೆಂಬಲಿತ ಪಹಲ್ಗಾಮ್‌ ದಾಳಿಯನ್ನು ಉಲ್ಲೇಖಿಸದೆ, ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದ ಪ್ರತ್ಯೇಕತಾವಾದಿಗಳ ದಾಳಿಯನ್ನು ಮಾತ್ರ ಉಲ್ಲೇಖಿಸಿದ ಕಾರಣಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಶೃಂಗಸಭೆಯ ಜಂಟಿ ಹೇಳಿಕೆಗೆ ಸಹಿ ಹಾಕಲು ನಿರಾಕರಿಸಿದರು.

ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯು ಚೀನಾದ ಚಿಂಗ್‌ಡಾವ್‌ನಲ್ಲಿ ಬುಧವಾರ ಮತ್ತು ಗುರುವಾರ ನಡೆಯಿತು. ಒಕ್ಕೂಟದ ಸದಸ್ಯ ದೇಶಗಳ ರಕ್ಷಣಾ ಸಚಿವರು ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಭಾರತವು ಜಂಟಿ ಹೇಳಿಕೆಗೆ ಸಹಿ ಹಾಕದ ಕಾರಣಕ್ಕೆ ಜಂಟಿ ಹೇಳಿಕೆ ಬಿಡುಗಡೆಯಾದೆಯೇ ಶೃಂಗಸಭೆ ಅಂತ್ಯಗೊಂಡಿತು.

'ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳು ಜಾಫರ್‌ ಎಕ್ಸ್‌ಪ್ರೆಸ್ ಅಪಹರಣ ಮಾಡಿದ್ದರ ಹಿಂದೆ ಭಾರತ ಇದೆ ಎಂಬ ಆರೋಪವುಳ್ಳ ಟಿಪ್ಪಣಿಯನ್ನು ಪಾಕಿಸ್ತಾನ ರವಾನಿಸಿತ್ತು. ಜಂಟಿ ಹೇಳಿಕೆಯಲ್ಲಿ ಈ ಬಗ್ಗೆ ಒಂದು ಪ್ಯಾರಾ ಸೇರಿಸಬೇಕು ಎಂದು ಸಂಸ್ಥೆಯ ಸದಸ್ಯ ದೇಶ ಪಾಕಿಸ್ತಾನವು ಸಭೆಯಲ್ಲಿ ಒತ್ತಾಯಿಸಿತು' ಎಂದು ಮೂಲಗಳು ಹೇಳಿವೆ.

'ಆದರೆ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಕುರಿತು, ಇದಕ್ಕೆ ಬೆಂಬಲ ನೀಡಿದ ಪಾಕಿಸ್ತಾನದ ಕುರಿತು, ಆ ದೇಶ ನಡೆಸುವ ಗಡಿಯಾಚೆಗಿನ ಭಯೋತ್ಪಾದನೆಯ ಕುರಿತು ಜಂಟಿ ಹೇಳಿಕೆಯಲ್ಲಿ ಉಲ್ಲೇಖ ಮಾಡುವಂತೆ ಭಾರತ ಒತ್ತಾಯಿಸಿತು. ಆದರೆ, ಒಂದು ದೇಶದ ಕಾರಣದಿಂದ ಇದಕ್ಕೆ ಒಪ್ಪಿಗೆ ದೊರೆಯಲಿಲ್ಲ' ಎಂದು ಮೂಲಗಳು ತಿಳಿಸಿವೆ.

'ಪಹಲ್ಗಾಮ್‌ ದಾಳಿಯ ವಿಚಾರವನ್ನೂ ಉಲ್ಲೇಖಿಸದೆ, ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನೂ ಹೇಳಿಕೆಯಲ್ಲಿ ಸೇರಿಸಲಿಲ್ಲ. ಆದರೆ, ಬಲೂಚಿಸ್ತಾನದಲ್ಲಿ ನಡೆದ ರೈಲು ಅಪಹರಣ ಮಾಡಿಸಿದ್ದು ಭಾರತ ಎಂದು ಆರೋಪಿಸಲಾಗಿದೆ. ಒಕ್ಕೂಟವು ಎಲ್ಲ ಸದಸ್ಯ ದೇಶಗಳ ಒಮ್ಮತದೊಂದಿಗೆ ನಡೆಯುತ್ತದೆ. ಆದರೆ ಪಾಕಿಸ್ತಾನದ ಕಾರಣದಿಂದ ಒಮ್ಮತಕ್ಕೆ ಬರಲಾಗಲಿಲ್ಲ' ಎಂದಿವೆ.

'ಶಾಂಘೈ ಸಹಕಾರ ಸಂಸ್ಥೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಚೀನಾವು ಪಾಕಿಸ್ತಾನದ ಒತ್ತಡದ ಕಾರಣದಿಂದ ಭಾರತದ ಒತ್ತಾಯವನ್ನು ತಳ್ಳಿಹಾಕಿದೆ ಎಂದು ಮೂಲಗಳು ಹೇಳಿವೆ' ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆಯ ಕುರಿತು ಭಾರತದ ಕಳವಳವನ್ನು ದಾಖಲಿಸಲು ಒಂದು ದೇಶ ಒಪ್ಪಿಕೊಳ್ಳಲಿಲ್ಲ. ಇದಕ್ಕಾಗಿಯೇ ಜಂಟಿ ಹೇಳಿಕೆ ಅಂತಿಮಗೊಳ್ಳಲಿಲ್ಲ ರಣಧೀರ್‌ ಜೈಸ್ವಾಲ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ

ರಾಜನಾಥ್‌ ಹೇಳಿದ್ದು * ಭಯೋತ್ಪಾದನೆ ಇರುವಲ್ಲಿ ಶಾಂತಿ ಮತ್ತು ಸಮೃದ್ಧಿಯು ಒಟ್ಟೊಟ್ಟಿಗೆ ಇರಲು ಸಾಧ್ಯವಿಲ್ಲ. ಭಯೋತ್ಪಾದನಾ ಚಟುವಟಿಕೆಗಳನ್ನು ಯಾರು ಪ್ರಾಯೋಜಿಸುತ್ತಾರೊ ಪೋಷಿಸುತ್ತಾರೊ ಮತ್ತು ತಮ್ಮ ಸ್ವಾರ್ಥ ಸಾಧನೆಗಾಗಿ ಯಾರು ಭಯೋತ್ಪಾದನೆಯನ್ನು ಬಳಸಿಕೊಳ್ಳುತ್ತಾರೊ ಅವರು ಖಂಡಿತವಾಗಿಯೂ ಪರಿಣಾಮಗಳನ್ನು ಎದುರಿಸಬೇಕು * ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಮ್ಮ ನೀತಿಯನ್ನಾಗಿಸಿಕೊಳ್ಳುತ್ತವೆ. ಉಗ್ರರಿಗೆ ಆಶ್ರಯ ನೀಡುತ್ತವೆ. ಇಬ್ಬಗೆಯ ನೀತಿಗೆ ಮನ್ನಣೆ ಸಿಗಬಾರದು. ಶಾಂಘೈ ಸಹಕಾರ ಒಕ್ಕೂಟವು ಇಂಥ ದೇಶಗಳನ್ನು ಟೀಕಿಸುವಲ್ಲಿ ಹಿಂಜರಿಯಬಾರದು

ಒಕ್ಕೂಟದಲ್ಲಿರುವ ದೇಶಗಳು ಭಾರತ ಇರಾನ್‌ ಕಜಕಿಸ್ತಾನ ಚೀನಾ ಪಾಕಿಸ್ತಾನ ರಷ್ಯಾ ತಜಕಿಸ್ತಾನ ಉಜ್ಬೆಕಿಸ್ತಾನ ಕಿರ್ಗಿಸ್ತಾನ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries