ಕಣ್ಣೂರು: ಸ್ನೇಹಿತನ ಜತೆ ಮಾತನಾಡಿದ ಕಾರಣಕ್ಕೆ ತಂಡವೊಂದು ಮಹಿಳೆಯನ್ನು ವಿಚಾರಣೆಗೊಳಪಡಿಸಿರುವುದಲ್ಲದೆ, ಸ್ನೇಹಿತನ ಹಾಗೂ ತನ್ನ ಮನೆಯವರನ್ನೂ ಕರೆಸಿ ಎಚ್ಚರಿಕೆ ನೀಡಿರುವುದರಿಂದ ಮನನೊಂದ ಮಹಿಳೆಯೊಬ್ಬಳು ಮನೆ ಕೊಠಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಣ್ಣೂರು ಪಿಣರಾಯಿಯ ಕಾಯಲೋಡ್ ಪರಂಬದಲ್ಲಿ ನಡೆದಿದೆ.
ಕಾಯಲೋಡ್ ಪರಂಬ ನಿವಾಸಿ ರಸೀನಾ(40)ಸಾವಿಗೀಡಾದ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿಯನ್ನು ಪಿಣರಾಯಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರಂಬಾಯಿ ನಿವಾಸಿಗಳಾದ ವಿ.ಸಿ ಮುಬಾಶಿರ್, ಕೆ.ಎ ಫೈಸಲ್ ಹಾಗೂ ವಿ.ಕೆ ರಫ್‍ನಾಸ್ ಬಂಧಿತರು. ಇವರೆಲ್ಲರೂ ಎಸ್‍ಡಿಪಿಐ ಕಾರ್ಯಕರ್ತರೆಂದು ಪೊಲೀಸರು ತಿಳಿಸಿದ್ದಾರೆ. ಇವರ ಜತೆ ಇನ್ನೂ ಕೆಲವರು ಆರೋಪಿಗಳಿದ್ದು, ಇವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸ್ನೇಹಿತನ ಜತೆ ಆತನ ಕಾರಿನ ಬಳಿ ನಿಂತು ಮಾತನಾಡುವ ಮಧ್ಯೆ ತಂಡವೊಂದು ಆಗಮಿಸಿ ರಸೀನಾಳನ್ನು ಬೆದರಿಸಿದ್ದು, ಯುವಕನ ಮೊಬೈಲ್, ಟ್ಯಾಬ್ ಕಸಿದು ಆತನನ್ನು ಮೈದಾನದ ಅಂಚಿಗೆ ಕರೆದೊಯ್ದು ಥಳಿಸಿದೆ. ನಂತರ ಮಹಿಳೆಯನ್ನು ಮನೆಗೆ ಕಳುಹಿಸಿ, ಯುವಕನನ್ನು ಎಸ್‍ಡಿಪಿಐ ಕಚೇರಿಗೆ ಕರೆದೊಯ್ದು, ಯುವಕನ ಹಾಗೂ ಮಹಿಳೆಯ ಮನೆಯವರನ್ನು ಕಚೇರಿಗೆ ಬರಮಾಡಿಕೊಂಡು ಅವರಿಗೂ ಎಚ್ಚರಿಕೆ ನೀಡಿ, ಯುವಕನನ್ನು ಆತನ ಸಂಬಂಧಿಕರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಯುವಕನಿಂದ ಕಸಿದು ತೆಗೆದ ಮೊಬೈಲ್ ಹಾಗೂ ಟ್ಯಾಬನ್ನು ಪೊಲೀಸರು ಪತ್ತೆಹಚ್ಚಿ ಯುವಕನಿಗೆ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಹಿಳೆ ಬರೆದಿಟ್ಟಿರುವ ಪತ್ರವೊಂದು ಪೊಲೀಸರಿಗೆ ಲಭಿಸಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





