ಕಾಸರಗೋಡು: ಜಿಲ್ಲೆಯ ಕೆಲವೊಂದು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಾಲಾ ರಕ್ಷಕ ಶಿಕ್ಷಕ ಫಂಡ್‍ಗಾಗಿ ಸಂಗ್ರಹಿಸಲಾಗುತ್ತಿರುವ ಮೊತ್ತವನ್ನು ಆರ್ಥಿಕವಾಗಿ ದುರ್ಬಲರಾಗಿರುವವರಿಂದಲೂ ಬಲವಂತವಾಗಿ ಪಡೆದುಕೊಳ್ಳಲಾಗುತ್ತಿದೆ ಎಂಬ ದೂರು ವ್ಯಾಪಕಗೊಂಡಿದೆ. ಶಾಲೆ ಅಥವಾ ಕಾಲೇಜುಗಳ ಅಭಿವೃದ್ಧಿ ಹಾಗೂ ಇತರ ಚಟುವಟಿಕೆಗಳಿಗಾಗಿ ಪ್ರವೇಶಾತಿ ಶುಲ್ಕದೊಂದಿಗೆ ಪಿಟಿಎ ಫಂಡ್ ವಸೂಲಿಮಾಡಲಾಗುತ್ತಿದ್ದು, ಇದರಿಂದ ಪರಿಶಿಷ್ಟ ಜಾತಿ-ಪ.ವರ್ಗ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಕೆಲವೊಂದು ಸಮುದಾಗಳನ್ನು ಹೊರತುಪಡಿಸಿ ಸರ್ಕಾರ ಪ್ರತ್ಯೇಕ ಸುತ್ತೋಲೆ ಹೊರಡಿಸಿದೆ. ಇದರ ಹೊರತಾಗಿಯೂ ಕೆಲವೊಂದು ಶಿಕ್ಷಣ ಸಂಸ್ಥೆಗಳು ಪಿಟಿಎ ಫಂಡ್ ವಸೂಲಿಮಾಡುತ್ತಿರುವುದಾಗಿ ವಿದ್ಯಾರ್ಥಿಗಳ ಹೆತ್ತವರು ಆರೋಪಿಸಿದ್ದಾರೆ. ಪ.ಜಾತಿ, ಪ.ವರ್ಗ ಅಥವಾ ಇತರ ಆರ್ಥಿಕವಾಗಿ ದುರ್ಬಲರಾಗಿರುವ ಬಗ್ಗೆ ಸೂಕ್ತ ಪ್ರಮಾಣಪತ್ರ ಸಲ್ಲಿಸಿದಲ್ಲಿ, ಈ ಮೊತ್ತ ವಸೂಲಿಯಿಂದ ಇವರನ್ನು ಹೊರತುಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಕಾಲೇಜುಗಳಲ್ಲಿ ಪದವಿ ತರಗತಿಗಾಗಿ ಪ್ರವೇಶಾತಿ ಆರಂಭಗೊಂಡಿದ್ದು, ಮಂಜೇಶ್ವರ ಸರ್ಕಾರಿ ಕಾಲೇಜಿನಲ್ಲಿ ಕೆಲವು ಪ. ಜಾತಿ ಸಮುದಾಯದ ವಿದ್ಯಾರ್ಥಿಗಳಿಂದ ಪಿಟಿಎ ಫಂಡ್‍ಗೆ ಹಣ ವಸೂಲಿ ಮಾಡಿರುವುದಾಗಿ ಆರೋಪ ಕೇಳಿಬಂದಿದೆ. ಸರ್ಕಾರದ ಅನುಮತಿ ಪ್ರಕಾರ ಶಾಲಾ ಕಾಲೇಜುಗಳ ಅಭಿವೃದ್ಧಿಗಾಗಿ ಪಿಟಿಎ ಫಂಡ್‍ಗೆ ಹಣ ವಸೂಲಿಮಾಡಬಹುದಾಗಿದ್ದರೂ, ಇದರಿಂದ ಪ.ಜಾತಿ, ಪ,ವರ್ಗ ಹಾಗೂ ಇತರ ದುರ್ಬಲ ವರ್ಗದವರಿಗೆ ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿ ಹೊರತಾಘಿಯೂ ಹಣ ವಸೂಲಿ ಮಾಡಿರುವುದಾಗಿ ದೂರು ಕೇಳಿ ಬರುತ್ತಿದೆ.
ಕಾಲೇಜಿನ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಕೆಲವೊಂದು ಶೈಕ್ಷಣಿಕ ಚಟುವಟಿಕೆಗಳಿಗೆ ಬೇಕಾದ ಮೊತ್ತವನ್ನು ಪಿಟಿಎ ಫಂಡ್‍ನಿಂದ ಬಳಸಿಕೊಳ್ಳಲಾಗುತ್ತಿದೆ. ಕಾಲೇಜಿನಲ್ಲಿ ಪ.ಜಾತಿ, ಪ.ವರ್ಗದವರಿಂದ ಬಲವಂತವಾಗಿ ಪಿಟಿಎ ಫಂಡ್‍ಗೆ ಹಣ ವಸೂಲಿ ನಡೆಸಿಲ್ಲ. ಅಥವಾ ಪಿಟಿಎ ಫಂಡ್‍ಗೆ ಹಣ ನೀಡದ ವಿಚಾರದಲ್ಲಿ ಯಾವೊಬ್ಬ ವಿದ್ಯಾರ್ಥಿಗೂ ದಾಖಲಾತಿ ನಿರಾಕರಣೆ ಮಾಡಲಾಗಿಲ್ಲ ಎಂಬುದಾಗಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಪ್ರಾಂಶುಪಾಲ ಮಹಮ್ಮದಾಲಿ ಸ್ಪಷ್ಟಪಡಿಸಿದ್ದಾರೆ.

