ಕಾಸರಗೋಡು: ಜಿಲ್ಲೆಯ ಶಾಲೆಗಳಲ್ಲಿ ನಡೆಯುತ್ತಿರುವ ರ್ಯಾಗಿಂಗ್ ಕಿರುಕುಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭಾರತ್ ರೆಡ್ಡಿ ಸ್ಪೆಶ್ಯಲ್ ಸ್ಕ್ವೇಡ್‍ಗೆ ನಿರ್ದೇಶ ನೀಡಿದ್ದಾರೆ.
ಶಾಲೆಗಳಲ್ಲಿ ರ್ಯಾಗಿಂಗ್‍ಗೆ ಸಮಾನವಾಗಿ ನಡೆಯುತ್ತಿರುವ ಕಿರುಕುಳ ಹೆಚ್ಚಾಗುತ್ತಿದ್ದು, ಇವುಗಳನ್ನು ರ್ಯಾಗಿಂಗ್ ಎಂದೇ ಪರಿಗಣಿಸಿ ಇಂತಹ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸ್ಪೆಶ್ಯಲ್ ಸ್ಕ್ವೇಡ್ ಪೊಲೀಸರು ಈಗಾಗಲೇ ನಿಗಾ ವಹಿಸಲಾರಂಭಿಸಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶಾಲಾ ವಠಾರ ಅಲ್ಲದೆ, ಪೇಟೆ ಹಾಗೂ ಇತರ ಪ್ರದೇಶಗಳಲ್ಲೂ ವಿದ್ಯಾರ್ಥಿಗಳ ಮಲೆ ನಿಗಾವಹಿಸಲಿದ್ದಾರೆ.
ಇತ್ತೀಚೆಗೆ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೈಯರ್ ಸೆಕೆಂಡರಿ ಶಾಲೆಯೊಂದರ ಹಿರಿಯ ವಿದ್ಯಾರ್ಥಿಗಳು ಪ್ಲಸ್‍ವನ್ ತರಗತಿ ವಿದ್ಯಾರ್ಥಿಗಳ ಮೇಲೆ ನಡೆಸಿರುವ ರ್ಯಾಗಿಂಗ್ ಕಿರುಕುಳವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇಂತಹ ಕೃತ್ಯಗಳನ್ನು ತಡೆಗಟ್ಟಲು ಕ್ರಮ ಆರಂಭಿಸಿದ್ದಾರೆ. ಜತೆಗೆ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವರ್ಷದಿಂದೀಚೆಗೆ ನಡೆದುಬರುತ್ತಿರುವ ವಿದ್ಯಾರ್ಥಿಗಳ ನಡುವಿನ ಘರ್ಷಣೆಯ ಬಗ್ಗೆಯೂ ಸ್ಪೆಶ್ಯಲ್ ಸ್ಕ್ವೇಡ್ ನಿಗಾವಹಿಸುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್‍ನಂತಹ ಕಿರುಕುಳ ತಡೆಗಟ್ಟಲು ಆಯಾ ವಿದ್ಯಾಸಂಸ್ಥೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರ ಸಹಕಾರ ಅಗತ್ಯ. ರ್ಯಾಗಿಂಗ್ ವಿರುದ್ಧ ವಿದ್ಯಾಸಂಸ್ಥೆಗಳಲ್ಲಿ ತಿಳಿವಳಿಕಾ ಶಿಬಿರ ಆಯೋಜಿಸಬೇಕು. ರ್ಯಾಗಿಂಗ್ ಕಿರುಕುಳದ ಬಗ್ಗೆ ಸಕಾಲದಲ್ಲಿ ಮಾಹಿತಿ ನೀಡದೆ ಮುಚ್ಚಿಡುವ ಶಿಕ್ಷಣ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ರ್ಯಾಗಿಂಗ್ ಸಂಬಂಧಪಟ್ಟ ದೂರುಗಳನ್ನು ಆಯಾ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ಪೊಲೀಸ್ ಠಾಣೆಗೆ ಅಥವಾ ಆ್ಯಂಟಿ ರ್ಯಾಗಿಂಗ್ ಹೆಲ್ಪ್‍ಲೈನ್ ಸಂಖ್ಯೆ(1800 180 5522)ಗೆ ಕರೆಮಾಡಿ ಅಥವಾ ವೆಬ್‍ಸೈಟಿಗೆ ಮಾಹಿತಿ ನೀಡುವಂತೆಯೂ ಅಧಿಕಾರಿಗಳು ಸೂಚಿಸಿದ್ದಾರೆ.

