ಕುಂಬಳೆ: ಕೊಯಿಪ್ಪಾಡಿ ಸಮುದ್ರದಲ್ಲಿ ಬೃಹತ್ ಬ್ಯಾರೆಲ್‍ಗಳು ಅಲೆಗಳಲ್ಲಿ ತೇಲಿಬಂದಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ನೀರಲ್ಲಿ ಭಾನುವಾರ ತೇಲಿಬಂದ ಬ್ಯಾರೆಲ್‍ಗಳನ್ನು ಮೀನುಕಾರ್ಮಿಕ ಸಯ್ಯೀದ್ ಪತ್ತೆಹಚ್ಚಿದ್ದು, ಈ ಬಗ್ಗೆ ನೀಡಿದ ಮಾಹಿತಿಯನ್ವಯ ಕರಾವಳಿ ಠಾಣೆ ಹಾಗೂ ಕುಂಬಳೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ನಡೆಸಿದ ತಪಾಸಣೆಯಿಂದ, ಬ್ಯಾರೆಲ್‍ನೊಳಗೆ ನೈಟಿಕ್ ಆಸಿಡ್ ಒಳಗೊಂಡಿರಬೇಕೆಂದು ಸಂಶಯಿಸಲಾಗಿದೆ. ಬ್ಯಾರೆಲ್‍ಗಳನ್ನು ತಪಾಸಣೆಗಾಗಿ ಮಂಗಳೂರಿನ ಬಂದರು ಮಂಡಳಿಗೆ ರವಾನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಸಮುದ್ರದಲ್ಲಿ ಮುಳುಗಡೆಯಾಗಿರುವ ಹಡಗಿನಿಂದ ಸಮುದ್ರಪಾಲಾಗಿರುವ ಬ್ಯಾರೆಲ್ ಇದಾಗಿರಬೇಕೆಂದು ಸಂಶಯಿಸಲಾಗಿದೆ.




