ಮುಳ್ಳೇರಿಯ: ಇಲ್ಲಿನ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ಬೆಳಗ್ಗೆ ಗಣಹೋಮದ ನಂತರ ಹೊಸ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವೂ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ರವೀಶ ತಂತ್ರಿ ಕುಂಟಾರು ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. "ಭಾರತೀಯರಾದ ನಾವು ಅಧ್ಯಾತ್ಮ, ಸಂಸ್ಕøತಿ ಸಂಸ್ಕಾರಗಳನ್ನು ಅರಿತಿರಬೇಕು. ಭಾರತದ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ, ನಮ್ಮ ಮಕ್ಕಳು ನಮ್ಮವರಾಗಿರಬೇಕೇ ಹೊರತು ವಿದೇಶಿ ಸಂಸ್ಕೃತಿಗೆ ದಾಸರಾಗಬಾರದು" ಎಂದು ಅವರು ನುಡಿದರು.
ಶಾಲಾ ಸಮಿತಿಯ ಅಧ್ಯಕ್ಷ ಗಣೇಶ ವತ್ಸ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರ ನಿರೀಕ್ಷೆಗಳನ್ನು ಹುಸಿ ಮಾಡದೇ ಪಂಚಾಂಗ ಶಿಕ್ಷಣವನ್ನು ನೀಡುತ್ತಿದ್ದೇವೆ. ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ವೇಣುಗೋಪಾಲನ್ ನಾಯರ್, ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ, ರಂಗನಾಥ ಶೆಣೈ, ಶೈಕ್ಷಣಿಕ ವಿಭಾಗದ ಅಧ್ಯಕ್ಷ ಶ್ರೀಪತಿ ಕಡಂಬಳಿತ್ತಾಯ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನವಾಗತ ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಆರತಿಯನ್ನು ಬೆಳಗಿ ತಿಲಕವಿಟ್ಟು ಸಿಹಿ ತಿನ್ನಿಸಿ ಸ್ವಾಗತಿಸಲಾಯಿತು. ಅನಂತರ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗಳಿಸಿದ ವಿದ್ಯಾರ್ಥಿಗಳಿಗೂ ಎಲ್.ಎಸ್.ಎಸ್-ಯು.ಎಸ್.ಎಸ್. ಮತ್ತು ಸಂಸ್ಕೃತ ಸ್ಕಾಲರ್ಶಿಪ್ ವಿಜೇತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಾಲೆಯ ಸಂಗೀತಾಧ್ಯಾಪಕ ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಶಾರದಾ ಸ್ವಾಗತಿಸಿ, ಶಿಕ್ಷಕಿ ನಮಿತಾ ಕಾರ್ಯಕ್ರಮ ನಿರೂಪಿಸಿದರೆ ಶಿಕ್ಷಕಿ ಗಾನಲತಾ ಎನ್ ವಂದಿಸಿದರು. ವಿದ್ಯಾರ್ಥಿಗಳು, ಪಾಲಕರು, ಅಧ್ಯಾಪಕವೃಂದ ಮತ್ತಿತರ ಆಡಳಿತ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






