ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ನಿರ್ಮಾಣ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಒತ್ತಾಯಿಸಿತು. ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸಿರುವುದರಿಂದ ಭೂಕುಸಿತ ಬಿರುಕು ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನಿರ್ಮಾಣ ಗುತ್ತಿಗೆ ಕಂಪನಿಗಳು ಇದರ ಹೊಣೆ ವಹಿಸಿಕೊಂಡು ಪರಿಹಾರವನ್ನು ಪಾವತಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಇ ಚಂದ್ರಶೇಖರನ್, ಸಿ ಎಚ್ ಕುಂಜಂಬು, ಎನ್ ಎ ನೆಲ್ಲಿಕುನ್ನು ಮತ್ತು ಎ ಕೆ ಎಂ ಅಶ್ರಫ್ ವಿಷಯ ಪ್ರಸ್ತಾಪಿಸಿದರು. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣದ ಬಗ್ಗೆ ಎಚ್ಚರಿಸಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಸ್ತುತ ಸಮಸ್ಯೆಗಳು ಉಲ್ಬಣಗೊಂಡಿವೆ ಎಂದು ಜನಪ್ರತಿನಿಧಿಗಳು ಗಮನಸೆಳೆದರು.
ಚೆರ್ಕಳದಿಂದ ನೀಲೇಶ್ವರ ವರೆಗೆ ಮತ್ತು ನೀಲೇಶ್ವರದಿಂದ ಕಾಲಿಕಡವುವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹಲವು ಅಪಾಯಕಾರಿ ಸ್ಥಳಗಳಿದ್ದು, ನಿರ್ಮಾಣದಲ್ಲಿನ ದೋಷಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಲಾಯಿತು. ಜಿಲ್ಲೆಯ ಅರೋಗ್ಯ ಇಲಾಖೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿ ನೇಮಕ ಮಡೆಸುವಂತೆಯೂ ಆಗ್ರಹಿಸಲಾಯಿತು.






