ಬದಿಯಡ್ಕ: ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಹೊಸತಾಗಿ ಸೇರ್ಪಡೆಗೊಂಡ ಎಲ್ಲಾ ವಿದ್ಯಾರ್ಥಿಗಳನ್ನೂ ಸಿಂದೂರವನ್ನಿಟ್ಟು ಆರತಿಯನ್ನು ಬೆಳಗಿ ಹರುಷದಿಂದ ಬರಮಾಡಿಕೊಳ್ಳಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಆಡಳಿತ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಹೊಸ ವಿದ್ಯಾರ್ಥಿಗಳ ಹರುಷದ ಹೊನಲು ಸಭಾಂಗಣದಲ್ಲಿ ತುಂಬಿತುಳುಕಿತು. ಸರಸ್ವತೀ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ನೂತನ ಶೈಕ್ಷಣಿಕ ವರ್ಷದ ಎಲ್ಲ ಕಾರ್ಯಚಟುವಟಿಕೆಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಚಿರಸ್ಥಾಯಿಯಾಗಲಿ ಎಂದು ಡಾ ಬೇ.ಸೀ.ಗೋಪಾಲಕೃಷ್ಣ ಭಟ್ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗಿರದೆ ಗದ್ದೆಬೇಸಾಯದಂತಹ ಕೌಶಲ್ಯಪ್ರದವಾದ ಹಲವಾರು ಚಟುವಟಿಕೆಗಳನ್ನು ಈ ವರ್ಷವೂ ನೀಡುತ್ತೇವೆ ಎಂಬುದಾಗಿ ಶಾಲಾ ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿ ಉಲ್ಲೇಖಿಸಿದರು. ಇಂದು ಬೆಳಗಿಸಿದ ದೀಪ ಈ ಶಾಲೆಯ ಮುನ್ನೂರೈವತ್ತೂ ಮಕ್ಕಳ ಮನೆಯ ದೀಪವಾಗಿ ಬೆಳಗಲಿ. ಇಲ್ಲಿ ನೀವು ಕಲಿತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿದಾಗ ನಿಮ್ಮ ಮನೆಯ ದೀಪವಾಗಿ ನೀವೇ ಬೆಳಗುತ್ತೀರಿ ಎಂಬುದಾಗಿ ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು ಶುಭಹಾರೈಸಿದರು. ಶಾಲೆಯ ಎಲ್ಲಾ ಕ್ರಿಯಾ ಚಟುವಟಿಕೆಗಳಿಗೆ ಪೋಷಕರಾದ ನಾವೆಲ್ಲರೂ ಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅನಂತಕೃಷ್ಣ ಚಡಗ ನುಡಿದರು. ಬದುಕಿನ ಗುರಿಯೆಡೆಗೆ ಸಾಗುವಲ್ಲಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳನ್ನು ಗಳಿಸುವುದು ಪ್ರಸಕ್ತ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ. ಹಾಗಿದ್ದಾಗ ಮಾತ್ರ ಹೆತ್ತವರ ಕನಸು ನನಸಾಗಲು ಸಾಧ್ಯ. ಇದಕ್ಕಾಗಿ ನಿಮ್ಮ ಕಾರ್ಯದಲ್ಲಿ ಎಂದೂ ವಿಮುಖರಾಗದಿರಿ ಎಂದು ಶಾಲಾ ಪ್ರಬಂಧಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಿಕೆ ತೇಜಸ್ವಿನಿ ವಂದಿಸಿದರು. 9ನೇ ತರಗತಿಯ ಪ್ರಕೃತಿ ಅಳಕ್ಕೆ ನಿರೂಪಿಸಿದಳು.





