ನಾವೆಲ್ಲ ಕೈಗಳಿಂದ ಚಪ್ಪಾಳೆ ತಟ್ಟುತ್ತೇವೆ. ಮೆಚ್ಚುಗೆಯ ವಿಚಾರಗಳ ವ್ಯಕ್ತಪಡಿಸುವಾಗ ಹಾಗೆ ಇಲ್ಲವೆ ಸಭೆ ಸಮಾರಂಭದಲ್ಲಂತು ನಿಮಿಷಕ್ಕೊಮ್ಮೆ ಚಪ್ಪಾಳೆ ತಟ್ಟುವುದು ನೋಡಬಹುದು. ಚಪ್ಪಾಳೆಯಿಂದ ಬರುವ ಶಬ್ದ ಬರುವುದು ಒಂದು ರೀತಿಯ ಹುಮ್ಮಸ್ಸು, ಪ್ರೋತ್ಸಾಹ ನೀಡಿದಂತೆ. ಆದ್ರೆ ಎರಡು ಕೈಗಳನ್ನು ಒಟ್ಟಿಗೆ ಜೋರಾಗಿ ಬಡಿದಾಗ ಶಬ್ದ ಬರುತ್ತದೆ ಎಂದು ನೀವು ಅಂದುಕೊಂಡಿರುತ್ತೀರಿ. ಆದ್ರೆ ಕೈಗಳಿಂದ ಶಬ್ದ ಬರುವುದಕ್ಕೆ ನಾವು ನೀವು ಅಂದುಕೊಂಡಿರುವಂತೆ ಎರಡು ಕೈಗಳು ಕಾರಣವಲ್ಲವಂತೆ.
ಹೌದು ನಿಮಗಿದು ಅಚ್ಚರಿ ಮೂಡಿಸಬಹುದು. ಚಪ್ಪಾಳೆಯ ಶಬ್ದ ಮೂಡುವುದು ಕೈಗಳನ್ನು ಹೋರಾಡಿ ಹೊಡೆಯುವುದರಿಂದ ಅಲ್ಲ ಎಂದು ವಿಜ್ಞಾನಿಗಳ ತಂಡವೊಂದು ಅಚ್ಚರಿಯ ಮಾಹಿತಿ ಹೊರಹಾಕಿದೆ. ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ಸಂಶೋಧಕರು ಚಪ್ಪಾಳೆಯಿಂದ ಹೇಗೆ ಶಬ್ದ ಹೊರಹೊಮ್ಮುತ್ತದೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಿ ಅದರಿಂದ ಹೊಸ ವಿಚಾರವನ್ನು ಹೊರಹಾಕಿದ್ದಾರೆ.
ಈ ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಎರಡು ಕೈಗಳ ಘರ್ಷಣೆಯಿಂದ ಮಾತ್ರವೇ ಈ ಶಬ್ದ ಉಂಟಾಗುವುದಿಲ್ಲ ಬದಲಿಗೆ ಎರಡೂ ಕೈಗಳ ನಡುವೆ ರೂಪುಗೊಳ್ಳುವ ಗಾಳಿಯಿಂದಾಗಿ ಈ ಶಬ್ದ ಮೂಡಲಿದೆ. ಇದು ಶಬ್ದವನ್ನು ಸೃಷ್ಟಿಸುವ ಕಂಪನಗಳನ್ನು ಉತ್ಪಾದಿಸಲಿವೆ ಎಂದು ಕಂಡುಕೊಂಡಿದ್ದಾರೆ.
ಫಿಸಿಕಲ್ ರಿವ್ಯೂ ರಿಸರ್ಚ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು, ಎರಡು ಅಂಗೈಗಳು ಒಟ್ಟಿಗೆ ಸೇರಿದಾಗ, ಅವುಗಳ ನಡುವೆ ಸ್ವಲ್ಪ ಪ್ರಮಾಣದ ಗಾಳಿ ಸಿಲುಕಲಿದೆ ಎಂದು ವಿವರಿಸಿದ್ದಾರೆ. ಈ ವೇಳೆ ನಿಮ್ಮ ಎರಡು ಕೈಗಳ ನಡುವೆ ಉಂಟಾಗುವ ವೇಗವು ಈ ಗಾಳಿಯನ್ನು ತ್ವರಿತವಾಗಿ ಬೆರಳುಗಳ ನಡುವೆ ಹಾದು ಹೊರಬರುವಂತೆ ಒತ್ತಡ ಹಾಕುತ್ತವೆ. ಇದು ಶಬ್ದದ ಕಂಪನಗಳಾಗಿ ಬದಲಾಗುತ್ತವೆ. ಇದು ಶಬ್ದವಾಗಿ ಮಾರ್ಪಡಿಸಲಿದೆ. ಇದನ್ನು ಖಚಿತ ಪಡಿಸಿಕೊಳ್ಳಲು ವಿಜ್ಞಾನಿಗಳು ನೈಜ ಮತ್ತು ಕೃತಕ ಸಿಲಿಕೋನ್ ಕೈಗಳನ್ನು ರಚಿಸಿ ಪ್ರಯೋಗಕ್ಕೆ ಮುಂದಾದರು.
ಈ ಸಮಯದಲ್ಲಿ ಗಾಲಿಯನ್ನು ಹಾಯಿಸಿ ವೇಗ ಹಾಗೂ ಕೈಗಳಿಂದ ಹೊರಹೊಮ್ಮುವ ಆ ಗಾಳಿಯಿಂದ ಬರುವ ಕಂಪನಗಳ ಸೆರೆಹಿಡಿದು ಅಧ್ಯಯನ ಮಾಡಿದರು. ಅಲ್ಲಿ ಶಬ್ದದ ತರಂಗಗಳು ಹೊರಹೊಮ್ಮುವುದು ದೃಢೀಕರಿಸಿದರು.
ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ಲಿಕುನ್ ಜಾಂಗ್ ತಮ್ಮ ಅಧ್ಯಯನವು ಧ್ವನಿಯ ಮೇಲೆ ಮಾತ್ರವಲ್ಲದೆ ಗಾಳಿಯ ಹರಿವು, ಕೈ ರಚನೆ ಮತ್ತು ಅದರಿಂದ ಉಂಟಾಗುವ ಪ್ರಭಾವದ ಮೇಲೆಯೂ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ. ಹಾಗೆ ವ್ಯಕ್ತಿಯಿಂದ ವ್ಯಕ್ತಿಗೆ ಬೆರಳಿನ ಅಚ್ಚುಗಳಲ್ಲಿ ಬದಲಾವಣೆ ಆಗುವಂತೆ ಚಪ್ಪಾಳೆಯ ಶಬ್ದದಲ್ಲೂ ಬದಲಾವಣೆ ನೋಡಬಹುದು ಎಂದಿದ್ದಾರೆ.
ಕೈಗಳ ಗಾತ್ರ, ವೇಗ, ಗಡಸು ಹೀಗೆ ಹಲವು ಅಂಶಗಳು ಚಪ್ಪಾಳೆಯಿಂದ ಹೊರಬರುವ ಶಬ್ದಕ್ಕೆ ನೇರವಾಗಿ ಸಂಬಂಧ ಹೊಂದಿರಲಿದೆಯಂತೆ. ಹಾಗೆ ಕೆಲವು ಬಾರಿ ಚಪ್ಪಾಳೆ ಹೊಡೆಯುತ್ತಿರುವ ಸ್ಥಳವೂ ಕೂಡ ಶಬ್ದದ ಮೇಲೆ ಪರಿಣಾಮ ಉಂಟು ಮಾಡಲಿದೆ ಎಂದಿದ್ದಾರೆ.
ಚಪ್ಪಾಳೆ ಹೊಡೆಯುವುದರಿಂದಲೂ ಇದೆ ಹಲವು ಪ್ರಯೋಜನ
ಇನ್ನು ಚಪ್ಪಾಳೆ ತಟ್ಟುವುದರಿಂದಲೂ ನಿಮಗೆ ಪ್ರಯೋಜನವಿದೆ ಎಂಬ ವಿಚಾರ ನಿಮಗೆ ತಿಳಿದಿದ್ಯಾ? ಕೈಗಳಲ್ಲಿ ನಮ್ಮ ದೇಹದ ಶಕ್ತಿ ಬಿಂದುಗಳು ನೆಲೆಸಿವೆ ಎಂದು ನಂಬಲಾಗಿದೆ. ಚಪ್ಪಾಳೆ ತಟ್ಟುವುದರಿಂದ ಈ ಶಕ್ತಿ ಬಿಂದುಗಳು ಜಾಗೃತಗೊಳ್ಳುತ್ತವೆ. ಸುಖಾಸನದಲ್ಲಿ ಕುಳಿತು ಚಪ್ಪಾಳೆ ತಟ್ಟುವುದರಿಂದ ರಕ್ತ ಪರಿಚಲನೆ ಸುಲಭಗೊಳಿಸುತ್ತದೆ. ಹೀಗೆ ನಿಮ್ಮ ಆರೋಗ್ಯಕ್ಕೂ ಕೂಡ ಚಪ್ಪಾಳೆ ಬಹಳ ಪ್ರಯೋಜನಕಾರಿ. ಇನ್ನು ಚಪ್ಪಾಳೆಯಿಂದ ದೈಹಿಕ ವ್ಯಾಯಾಮ ಕೂಡ ಆಗಲಿದೆ. ಹೀಗಾಗಿ ಪಾರ್ಕ್‌ಗಳಲ್ಲಿ ನೀವು ಚಪ್ಪಾಳೆ ಹೊಡೆಯುವ ಮಂದಿಯನ್ನು ಆಗಾಗ ನೋಡಬಹುದು.






