ಪ್ರಯಾಗರಾಜ್: 'ದೇಶವು ಬಿಕ್ಕಟ್ಟು ಎದುರಿಸಿದಾಗಲೆಲ್ಲ ಒಗ್ಗಟ್ಟಿನಿಂದ, ಬಲಶಾಲಿಯಾಗಿ ನಿಂತಿದೆ. ಇದರ ಶ್ರೇಯವನ್ನು ಸಂವಿಧಾನಕ್ಕೆ ನೀಡಬೇಕು' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಹೇಳಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಈ ಮಾತು ಹೇಳಿದ್ದಾರೆ.
'ಸಂವಿಧಾನವು ಒಕ್ಕೂಟ ವ್ಯವಸ್ಥೆಗೆ ಹೆಚ್ಚು ಒತ್ತು ಕೊಡುತ್ತದೆ ಎಂದು ಕೆಲವರು, ಕೇಂದ್ರೀಕೃತ ವ್ಯವಸ್ಥೆಗೆ ಹೆಚ್ಚು ಒತ್ತು ಕೊಡುತ್ತದೆ ಎಂದು ಇನ್ನು ಕೆಲವರು ಹೇಳಿದ್ದರು. ಆದರೆ ಸಂವಿಧಾನವು ಪೂರ್ತಿಯಾಗಿ ಒಕ್ಕೂಟ ವ್ಯವಸ್ಥೆಯನ್ನು ತರುವುದಿಲ್ಲ, ಪೂರ್ತಿಯಾಗಿ ಕೇಂದ್ರೀಕೃತ ವ್ಯವಸ್ಥೆಯನ್ನು ಕೂಡ ತರುವುದಿಲ್ಲ ಎಂದು ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ಹೇಳಿದ್ದರು. ಶಾಂತಿ ಕಾಲದಲ್ಲಿ ಮತ್ತು ಯುದ್ಧ ಕಾಲದಲ್ಲಿ ಭಾರತವನ್ನು ಒಟ್ಟಾಗಿ ಇರಿಸುವ ಸಂವಿಧಾನವನ್ನು ನಾವು ನೀಡಿದ್ದೇವೆ ಎಂಬುದನ್ನು ನಾನು ಹೇಳಬಲ್ಲೆ ಎಂದೂ ಅಂಬೇಡ್ಕರ್ ಹೇಳಿದ್ದರು' ಎಂದು ಗವಾಯಿ ನೆನಪಿಸಿಕೊಂಡಿದ್ದಾರೆ.
ಸಂವಿಧಾನದ ಕಾರಣದಿಂದಾಗಿ ಭಾರತವು ಸ್ವಾತಂತ್ರ್ಯಾನಂತರದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಸಾಗಿಬಂದಿದೆ ಎಂದು ಸಿಜೆಐ ಹೇಳಿದ್ದಾರೆ.




