ಇದಕ್ಕೆ ತಾಜಾ ನಿದರ್ಶನವೊಂದು ಸಿಕ್ಕಿದೆ. ಚೀನಾದ ದಕ್ಷಿಣದ ಪ್ರಾಂತ್ಯವಾದ ಗ್ಯಾಂಗ್ಕ್ಸಿಯ ಹಲವೆಡೆ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ.
ಇದರಿಂದ ಸಾಕಷ್ಟು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದ್ದು 10ಕ್ಕೂ ಹೆಚ್ಚು ಜನ ಇದರಲ್ಲಿ ಮೃತಪಟ್ಟಿದ್ದಾರೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.
ಇದೇ ಪರಿಸ್ಥಿತಿಯಲ್ಲಿ ಜಗತ್ತೇ ನಿಬ್ಬೆರಗಾಗುವಂತೆ ಘಟನೆ ನಡೆದಿದೆ. ಹೈಪೊಂಗ್ ಬಳಿ ಪ್ರವಾಹದಲ್ಲಿ ಸಿಲುಕಿದ್ದ ತೂಕದ ವ್ಯಕ್ತಿಯನ್ನು ಅತ್ಯಾಧುನಿಕ ಡ್ರೋನ್ ಮೂಲಕ ರಕ್ಷಿಸಲಾಗಿದೆ.
ಡ್ರೋನ್‌ನಲ್ಲಿ ಆ ವ್ಯಕ್ತಿಯನ್ನು ರಕ್ಷಿಸುತ್ತಿರುವ ವಿಡಿಯೊಗಳು ಜಾಲತಾಣಗಳಲ್ಲಿ ಕಾಣಿಸಿಕೊಂಡು ಬೆರಗು ಮೂಡಿಸಿವೆ. ಡ್ರೋನ್ ತಂತ್ರಜ್ಞಾನದಲ್ಲಿ ಚೀನಾ ಸಾಕಷ್ಟು ನವನವೀನ ಆವಿಷ್ಕಾರಗಳನ್ನು ಮಾಡುತ್ತಿರುವುದಕ್ಕೆ ಇದು ಉದಾಹರಣೆಯಾಗಿದೆ. ಈ ಡ್ರೋನ್ ಸುಮಾರು 100 ಕೆ.ಜಿವರೆಗಿನ ತೂಕವನ್ನು ಹತ್ತಾರು ಕಿ.ಮೀ ದೂರ ಹೊತ್ತೊಯ್ಯಬಲ್ಲದು ಎಂದು ಹೇಳಲಾಗಿದೆ.
ತುರ್ತು ಪರಿಸ್ಥಿತಿ, ವಿಕೋಪದ ಸಂದರ್ಭದಲ್ಲಿ ಈ ಡ್ರೋನ್ ಬಳಕೆ ಪರಿಣಾಮಕಾರಿಯಾಗಿರಲಿದೆ. ಇದೊಂದು ಕ್ರಾಂತಿಕಾರಕ ಹೆಜ್ಜೆ ಎಂದು ಹಲವು ನೆಟ್ಟಿಗರು ಹೇಳಿದ್ದಾರೆ. ಕೆಲ ಭಾರತೀಯರು ಈ ವಿಡಿಯೊ ಹಂಚಿಕೊಂಡು ಚೀನಾ ಇಂತಹ ಡ್ರೋನ್‌ಗಳ ಮೂಲಕ ಭಾರತಕ್ಕೆ ರಕ್ಷಣಾ ಬೆದರಿಕೆ ಒಡ್ಡಬಹುದು ಎಂದು ವಿಶ್ಲೇಷಿಸಿದ್ದಾರೆ.




