ಕಾಸರಗೋಡು: ಹದಿನೆಂಟನೇ ಶತಮಾನದಲ್ಲಿ ಮಾಲ್ವಾದ ದೊರೆಯಾಗಿ ಭಾರತೀಯ ರಾಜಕಾರಣವನ್ನು ಮುನ್ನಡೆಸಿದ್ದ ಅಹಲ್ಯಾ ಹೋಳ್ಕರ್, ಭಾರತೀಯ ಮಹಿಳೆಯರಿಗೆ ಆದರ್ಶಪ್ರಾಯರಾಗಿರುವುದಲ್ಲದೆ ಸ್ತ್ರೀ ಶಕ್ತಿಯ ಸಂಕೇತವಾಗಿ ಗುರುತಿಸಿರುವುದಾಗಿ ಬಿಜೆಪಿ ಮಾಜಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ವಿ.ಕೆ. ಸಜೀವನ್ ತಿಳಿಸಿದ್ದರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆಯ ಅಂಗವಾಗಿ ಬಿಜೆಪಿ ಜಿಲ್ಲಾ ಸಮಿತಿ ಆಯೋಜಿಸಿದ್ದ ಸೌಹಾರ್ದ ಸಂಗಮ ಉದ್ಘಾಟಿಸಿ ಮಾತನಾಡಿದರು. ಮರಾಠಾ ಸಾಮ್ರಾಜ್ಯದ ಅತ್ಯುತ್ತಮ ಆಡಳಿತಗಾರರಾಗಿ, ಶಿಕ್ಷಣ ಮತ್ತು ಮಿಲಿಟರಿ ಪರಾಕ್ರಮ ಎರಡರಲ್ಲೂ ಪಾರಮ್ಯ ಮೆರೆದಿದ್ದ ಅವರು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವುದರ ಜತೆಗೆ ಸಾಮಾಜಿಕ ನ್ಯಾಯ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಉತ್ತೇಜಿಸಿದರು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಮತ್ತು ಕೌನ್ಸಿಲರ್, ಹಿರಿಯ ನಾಯಕಿ ಸವಿತಾ ಟೀಚರ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಸ್ವಾಗತಿಸಿದರು. ಕಾರ್ಯದರ್ಶಿ ಪುಷ್ಪಾಗೋಪಾಲನ್ ವಂದಿಸಿದರು.






