ಉಪ್ಪಳ: ಪೈವಳಿಕೆ ಪಂಚಾಯತಿ ವ್ಯಾಪ್ತಿಯ ಚಿಪ್ಪಾರು ಕಡೆಂಕೋಡಿಯಲ್ಲಿ ರಸ್ತೆಗೆ ಮರ ಮುರಿದು ಬಿದ್ದು ಬಸ್ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಂಗಳವಾರ ಬೆಳಿಗ್ಗೆ ರಸ್ತೆ ಬದಿಯ ಮರ ತುಂಡಾಗಿ ವಿದ್ಯುತ್ ತಂತಿ ಮೇಲೆ ಸಿಲುಕಿ ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಇದರಿಂದ ಉಪ್ಪಳ-ಲಾಲ್‍ಬಾಗ್-ಕುರುಡಪದವು ರೂಟ್‍ನಲ್ಲಿ ಬಸ್ ಸಂಚಾರ ಮೊಟಕುಗೊಂಡಿತು. ಸಣ್ಣ ವಾಹನಗಳು ಸಂಚರಿಸುತ್ತಿದ್ದವು.
ಮರ ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ತರೆವುಗೊಳಿಸಲು ವಿಳಂಬವಾಗಿದೆ. ವಿದ್ಯುತ್ ಕಚೇರಿಯಿಂದ ನೌಕರರು ತಲುಪಿ ಮರವನ್ನು ಅಪರಾಹ್ನ ತೆರವುಗೊಳಿಸಿದರು. ಬಳಿಕ ಸಂಚಾರ ಪುನರಾರಂಭಗೊಂಡಿತು.
ಬಂಬ್ರಾಣ, ಉಳುವಾರಿನಿಂದ ಹಲವು ಕುಟುಂಬಗಳ ಸ್ಥಳಾಂತರ:
ಕುಂಬಳೆ: ಉಳುವಾರು, ಬಂಬ್ರಾಣ ಬಯಲು ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು, ಇದರಿಂದ ಈ ಪ್ರದೇಶಗಳಿಂದ ಹಲವು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಉಳುವಾರಿನಿಂದ 15 ಕುಟುಂಬಗಳನ್ನು, ಬಂಬ್ರಾಣ ಬಯಲು ಪ್ರದೇಶದಿಂದ 10 ಕುಟುಂಬಗಳನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಮಳೆ ತೀವ್ರಗೊಂಡರೆ ಇನ್ನಷ್ಟು ಕುಟುಂಬಗಳನ್ನು ತೆರವುಗೊಳಿಸಬೇಕಾಗಿ ಬರಲಿದೆ.

.jpg)

