ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿಯಲ್ಲಿ ತಾಯಿಯನ್ನು ಸ್ವತ: ಪುತ್ರ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈದು, ನೆರೆಮನೆ ನಿವಾಸಿ ಮಹಿಳೆಯನ್ನು ಬೆಂಕಿಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ವರ್ಕಾಡಿಯ ನಲ್ಲೆಂಗಿ ಎಂಬಲ್ಲಿ ಗುರುವಾರ ನಸುಕಿಗೆ ಭಯಾನಕ ಕೃತ್ಯ ನಡೆದಿದೆ. ನಲ್ಲೆಂಗಿ ನಿವಾಸಿ ಲೂಯಿಸ್ ಮೊಂತೇರೊ ಅವರ ಪತ್ನಿ ಹಿಲ್ಡಾ ಮೊಂತೆರೋ (65)ಮೃತಪಟ್ಟ ಮಹಿಳೆ. ನೆರೆಮನೆ ನಿವಾಸಿ ವಿಕ್ಟರ್ ಎಂಬವರ ಪತ್ನಿ ಲೊಲಿಟ ಅವರನ್ನು ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಲ್ಡಾ ಮೊಂತೆರ ಅವರ ಪುತ್ರ ಮೆಲ್ವಿನ್ ಮೊಂತೇರೋ(38) ಆರೋಪಿಯಗಿದ್ದು, ಪರಾರಿಯಾಗುವ ಮಧ್ಯೆ ಈತನನ್ನು ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಾಲ್ತೊಡು ಬ್ಯಾತಿಯಾನಿ ಎಂಬಲ್ಲಿಂದ ಅಲ್ಲಿನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ನಂತರ ಮಂಜೇಶ್ವರ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಮನೆಯಲ್ಲಿ ತಾಯಿ ಮತ್ತು ಪುತ್ರ ಇಬ್ಬರೇ ವಾಸಿಸುತ್ತಿದ್ದು, ಬುಧವಾರ ರಾತ್ರಿ ಆಹಾರ ಸೇವಿಸಿ ಮಲಗಿದ್ದ ತಾಯಿ ದೇಹಕ್ಕೆ ಗುರುವಾರ ನಸುಕಿನ ಸುಮಾರು ಒಂದು ಗಂಟೆ ವೇಳೆಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈದು ಮೃತ ದೇಹವನ್ನು ಸಮೀಪದ ಕುರುಚಲು ಕಾಡಿಗೆ ಎಸೆದಿದ್ದಾನೆ. ನಂತರ ತಾಯಿಗೆ ಸೌಖ್ಯವಿಲ್ಲವೆಂದು ತಿಳಿಸಿ, ಸಂಬಂಧಿಕೆ ನೆರೆಮನೆ ನಿವಾಸಿ ಲೊಲಿಟ ಅವರನ್ನು ಕರೆಸಿ, ಅವರ ಮೈಮೇಲೂ ಪೆಟ್ರೋಲ್ ಚೆಲ್ಲಿ ಬೆಂಕಿ ಹಚ್ಚಿದ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಲೊಲಿಟ ಅವರು ಬೊಬ್ಬಿಟ್ಟಾಗ ಆಸುಪಾಸಿನವರು ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಲೊಲಿಟ ಅವರ ತಲೆ ಹಾಗೂ ಕಾಲಿಗೆ ಸುಟ್ಟ ಗಾಯಗಳುಂಟಾಗಿದೆ. ಈ ಮಧ್ಯೆ ಮೆಲ್ವಿನ್ ಅಲ್ಲಿಂದ ಪರಾರಿಯಾಗಿದ್ದನು. ಹಿಲ್ಡಾ ಮೊಂತೆರೋ ಮನೆಯಲ್ಲಿಲ್ಲದಿರುವುನ್ನು ಗಮನಿಸಿ ಹುಡುಕಾಟ ನಡೆಸುವ ಮಧ್ಯೆ ಮನೆಯಿಂದ ಅನತಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ವರ್ಕಾಡಿ ವರೆಗೂ ನಡೆದುಹೋಗಿ, ಅಲ್ಲಿಂದ ಬಸ್ಸನ್ನೇರಿ ಈತ ಮಂಗಳೂರು ತೆರಳಿ, ಅಲ್ಲಿಂದ ಕೊಲ್ಲೂರು ಭಾಗಕ್ಕೆ ತೆರಳಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಮಂಗಳೂರು ಭಾಗಕ್ಕೆ ಸಂಚರಿಸಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಮಂಜೇಶ್ವರ ಠಾಣೆಯಿಂದ ಮಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್‍ಭಾರತ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ವಾನದಳ, ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿದ್ದು, ಎಸ್.ಪಿ ವಿಜಯಭಾರತ್ ರೆಡ್ಡಿ ಅವರ ನಿರ್ದೇಶ ಪ್ರಕಾರ ಮಂಜೇಶ್ವರ ಠಾಣೆ ಇನ್ಸ್‍ಪೆಕ್ಟರ್ ಇ. ಅನೂಪ್ ನೇತೃತ್ವದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹ ಉನ್ನತ ತಪಾಸಣೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಹಿಲ್ಡಾ ಮೊಂತೆರೋ ಅವರ ಇನ್ನೊಬ್ಬ ಪುತ್ರ ವಿದೇಶದಲ್ಲಿದ್ದಾರೆ.





