ಕಾಸರಗೋಡು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕ್ಯಾನ್ಸರ್ ತಡೆಗಟ್ಟುವಿಕೆ ಅಭಿಯಾನವಾದ 'ಆರೋಗ್ಯ, ಸಂತೋಷ, ಕ್ಯಾನ್ಸರ್ ತೊಲಗಿಸೋಣ' ಯೋಜನೆಯ ಎರಡನೇ ಹಂತವನ್ನು ಬಲಪಡಿಸಲು ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಪುರುಷರಲ್ಲಿ ಹೆಚ್ಚಾಗಿ ಕಂಡುಬರುವ ಬಾಯಿಯ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಅನ್ನು ಕೇಂದ್ರೀಕರಿಸಿ ಈ ಹಂತವನ್ನು ಜಾರಿಗೆ ತರಲಾಗುತ್ತಿದೆ. ಮೇ 31 ರಂದು ವಿಶ್ವ ತಂಬಾಕು ರಹಿತ ದಿನದಂದು ಪ್ರಾರಂಭವಾದ ಈ ಅಭಿಯಾನವು ಆರು ಪ್ರಮುಖ ಅಂಶಗಳು ಮತ್ತು 11 ವಿಧಾನಗಳ ಮೇಲೆ ಕೇಂದ್ರೀಕರಿಸುತ್ತದೆ.
ತಂಬಾಕು ವಿರುದ್ಧ ಜಾಗೃತಿ - ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ತಂಬಾಕು ನಿಯಂತ್ರಣ ಕಾಯ್ದೆ, 2003 ರ ಅನುಷ್ಠಾನ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಅದನ್ನು ಕಾರ್ಯಗತಗೊಳಿಸಿರುವ ಬಗ್ಗೆ ಖಚಿತಪಡಿಸುವುದು, ಬಾಯಿಯ ಕ್ಯಾನ್ಸರ್ ತಪಾಸಣೆ, ಬಾಯಿಯ ಕ್ಯಾನ್ಸರ್‍ನ ಆರಂಭಿಕ ಪತ್ತೆಗಾಗಿ ಪರೀಕ್ಷೆಗಳನ್ನು ನಡೆಸುವುದು, ಕರುಳಿನ ಕ್ಯಾನ್ಸರ್ ಜಾಗೃತಿ ಹಾಗೂ ಈಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು, ತಂಬಾಕು ಮುಕ್ತ ಶಾಲೆಗಳು, ತಂಬಾಕು ಬಳಕೆ, ಧೂಮಪಾನದಿಂದ ವಿಮುಖರಾಗಲು ಬಯಸುವವರಿಗೆ ಸಹಾಯ ಮಾಡುವ ಚಿಕಿತ್ಸಾಲಯಗಳನ್ನು ಸ್ಥಾಪಿಸುವುದು ಜತೆಗೆ ಅಭಿಯಾನದ ಭಾಗವಾಗಿ, ವೈದ್ಯಕೀಯ ಅಧಿಕಾರಿಗಳು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡುವುದು. ಜತೆಗೆ ಬಾಯಿಯ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ಪ್ರತಿ ವಾರ ಎರಡು ದಿನಗಳ ಕಾಲ ನಡೆಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.
ಅಬಕಾರಿ, ಆರೋಗ್ಯ, ಶಿಕ್ಷಣ ಮತ್ತು ಸ್ಥಳೀಯ ಸ್ವ-ಸರ್ಕಾರದಂತಹ ಇಲಾಖೆಗಳ ಸಮನ್ವಯದೊಂದಿಗೆ ಮುಂದಿನ ಮೂರು ತಿಂಗಳವರೆಗೆ ಜಾರಿಗೆ ತರಬೇಕಾದ ಚಟುವಟಿಕೆಗಳಿಗೆ ವಿವರವಾದ ಮಾರ್ಗಸೂಚಿಯ್ನು ಒಂದು ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.





