ವಿಶಾಖಪಟ್ಟಣ: ಯೋಗವು ಜನರನ್ನು ಏಕತೆಯತ್ತ ಕೊಂಡೊಯ್ಯುತ್ತದೆ. ಆಂತರಿಕ ಶಾಂತಿಯು ಜಾಗತಿಕ ನೀತಿಯಾಗುವುದಕ್ಕೆ ಯೋಗ ನಾಂದಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದ್ದಾರೆ.
11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತವು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿತ್ತು.
ಅಲ್ಪಾವಧಿಯಲ್ಲಿಯೇ 175 ದೇಶಗಳು ಇದನ್ನು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ.
11 ವರ್ಷಗಳ ನಂತರ, ಯೋಗವು ಈಗ ಪ್ರಪಂಚದಾದ್ಯಂತ ಕೋಟ್ಯಂತರ ಜನರ ಜೀವನದ ಒಂದು ಭಾಗವಾಗಿದೆ. ಸಿಡ್ನಿ ಒಪೇರಾ ಹೌಸ್ ಆಗಿರಲಿ ಅಥವಾ ಎವರೆಸ್ಟ್ ಪರ್ವತವಾಗಲಿ ಯೋಗ ಎಲ್ಲರಿಗೂ ಎಂಬ ಸಂದೇಶವಿದೆ ಎಂದು ಮೋದಿ ತಿಳಿಸಿದ್ದಾರೆ.
ಪ್ರಪಂಚದಾದ್ಯಂತ ಕೆಲವು ಉದ್ವಿಗ್ನತೆ ಪರಿಸ್ಥಿತಿ ಉಂಟಾಗಿದೆ. ಜಗತ್ತಿಗೆ ನನ್ನ ವಿನಂತಿ ಏನೆಂದರೆ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಗುರುತಿಸಲಿ. ಮಾನವೀಯತೆಯ ದೃಷ್ಟಿಯಿಂದಾಗಿ ಆಂತರಿಕ ಶಾಂತಿಯು ಜಾಗತಿಕ ನೀತಿಯಾಗುವುದಕ್ಕೆ ಯೋಗ ಸಹಕಾರಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಯೋಗವು ಎಲ್ಲಾ ಗಡಿಗಳನ್ನು, ಹಿನ್ನೆಲೆಗಳು, ವಯಸ್ಸು ಅಥವಾ ಸಾಮರ್ಥ್ಯವನ್ನು ಮೀರಿ ಎಲ್ಲರ ಪಾಲ್ಗೊಳ್ಳುವಿಕೆಗೆ ವೇದಿಕೆಯಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಇದೇ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮಾತನಾಡಿ, ಮೋದಿ ಅವರು ಯೋಗವನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನಪ್ರಿಯಗೊಳಿಸಿದರು, ಅದನ್ನು ಜಾಗತಿಕ ಸ್ವಾಸ್ಥ್ಯ ಆಂದೋಲನವನ್ನಾಗಿ ಪರಿವರ್ತಿಸಿದರು ಎಂದು ಗುಣಗಾನ ಮಾಡಿದ್ದಾರೆ.


