ರಾಯಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂನ್ 22ರಿಂದ ಎರಡು ದಿನ ಛತ್ತೀಸ್‌ಗಢ ಪ್ರವಾಸ ಕೈಗೊಳ್ಳಲಿದ್ದು ಈ ವೇಳೆ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ.
ಇದಕ್ಕೂ ಮೊದಲು ರಾಜ್ಯ ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ಪಡೆಗಳ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.
ನಂತರ ಬಸ್ತರ್, ಸುಕ್ಮಾ ಜಿಲ್ಲೆ ಸೇರಿದಂತೆ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿರುವ ಭದ್ರತಾ ಪಡೆಗಳ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಮ್ಮ ಭೇಟಿಯ ಮೊದಲ ದಿನ (ಭಾನುವಾರ) ಅಮಿತ್ ಶಾ ಅವರು ಇಲ್ಲಿನ ಅಟಲ್ ನಗರದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (NFSU) ಮತ್ತು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ರಾಜ್ಯ ಸರ್ಕಾರ ಇವೆರಡಕ್ಕೂ ಸುಮಾರು 40 ಎಕರೆ ಭೂಮಿಯನ್ನು ನೀಡಿದೆ. ಕೇಂದ್ರ ಸರ್ಕಾರ ಸುಮಾರು ₹ 400 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಸೇರಿದಂತೆ ಕಟ್ಟಡ ನಿರ್ಮಾಣ ಮಾಡಲಿದೆ.




