ದೇಶದ ಹಲವೆಡೆ ರಾಷ್ಟ್ರೀಯ ಹೆದ್ದಾರಿಗಳು ಉದ್ಘಾಟನೆಯಾಗಿದ್ದರೆ, ಇನ್ನೂ ಕೆಲವು ಕಾಮಗಾರಿ ಹಂತದಲ್ಲಿವೆ. ಕರ್ನಾಟಕದಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಈಗಾಗಲೇ ಉದ್ಘಾಟನೆಯಾಗಿ ಇಲ್ಲಿ ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಹಂತದಲ್ಲಿದ್ದರೆ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್ ವೇ ಕಾಮಗಾರಿ ಇನ್ನೂ ಆರಂಭವಾಗಬೇಕಿದೆ.
ಈ ನಡುವೆಯೇ ಇದೀಗ ಉತ್ತರ ಪ್ರದೆಶದ ಸಿಎಂ ಯೋಗಿ ಆದಿತ್ಯನಾಥ್ ಅವರು 91.35 ಕಿ.ಮೀ. ಉದ್ದದ 7283.28 ಕೋಟಿ ರೂಪಾಯಿ ವೆಚ್ಚದ ಗೋರಖ್‌ಪುರ ಲಿಂಕ್ ಎಕ್ಸ್‌ಪ್ರೆಸ್‌ವೇ ಅನ್ನು ಉದ್ಘಾಟನೆ ಮಾಡಿದ್ದಾರೆ. ಬಳಿಕ ಭಗವಾನ್‌ಪುರ ಟೋಲ್ ಪ್ಲಾಜಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂಲಸೌಕರ್ಯ ಅಭಿವೃದ್ಧಿ ವೇಗ ಆದರೆ ಪ್ರಗತಿಯೂ ವೇಗಗೊಳ್ಳುತ್ತದೆ. ಪ್ರಗತಿ ವೇಗ ಆದರೆ ಸಮೃದ್ಧಿ ತಾನಾಗಿಯೇ ಬರುತ್ತದೆ ಎಂದು ಹೇಳಿದರು.
2017ರ ಬಳಿಕ ಉತ್ತರ ಪ್ರದೇಶದಲ್ಲಿ ಮೂಲಸೌಕರ್ಯಗಳಿಗೆ ಗಮನ ಹರಿಸಲಾಗಿದೆ. ಇದರಿಂದ ರಾಜ್ಯವು ಪ್ರಸ್ತುತ ಅಬೀವೃದ್ಧಿಯತ್ತ ಸಾಗುತ್ತಿದೆ. 2017ರ ಮೊದಲು ಉತ್ತರ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೊರತೆಯಿತ್ತು. ಬಡವರ ಕಲ್ಯಾಣ ಯೋಜನೆಗಳ ಲಾಭ ಫಲಾನುಭವಿಗಳಿಗೆ ಸಿಗುತ್ತಿರಲಿಲ್ಲ. ಸಾಂಪ್ರದಾಯಿಕ ಉದ್ಯಮಗಳು ಮುಚ್ಚುವ ಹಂತದಲ್ಲಿದ್ದವು. ಇದೀಗ ರಾಜ್ಯವು ಮಾಫಿಯಾ, ಗೂಂಡಾ ಹಾಗೂ ಗಲಭೆ ಮುಕ್ತವಾಗಿದೆ. ಇದು ದೇಶದಲ್ಲಿ ಪ್ರವಾಸೋದ್ಯಮ ಮತ್ತು ಹೂಡಿಕೆಗೆ ಉತ್ತಮ ತಾಣವಾಗಿದೆ ಎಂದು ಹೇಳಿದರು.
ಎಕ್ಸ್‌ಪ್ರೆಸ್ ವೇನಿಂದ ಏನೆಲ್ಲಾ ಪ್ರಯೋಜನೆಗಳಿವೆ?: ಉತ್ತರ ಪ್ರದೇಶದ ಎಕ್ಸ್‌ಪ್ರೆಸ್‌ವೇಗಳು ಹೂಡಿಕೆಗೆ ಹೆಚ್ಚು ಸಹಕಾರಿಯಾಗಲಿದೆ. ಸಾರಿಗೆ ಸಂಪರ್ಕವನ್ನು ಹೆಚ್ಚಿಸಿದಂತೆ ಅಗಲಿದೆ. ಗೋರಖ್‌ಪುರ ಲಿಂಕ್ ಎಕ್ಸ್‌ಪ್ರೆಸ್‌ವೇ ಮೂಲಕ ಗೋರಖ್‌ಪುರದ ದಕ್ಷಿಣ ಭಾಗದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಆಗಲಿವೆ. ಗೋರಖ್‌ಪುರ ಲಿಂಕ್ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣವು ಆರಾಮದಾಯಕ ಆಗಿದೆ ಮತ್ತು ಸಮಯವೂ ಉಳಿತಾಯ ಆಗಲಿದೆ.
ಗೋರಖ್‌ಪುರದಿಂದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮೂಲಕ ಲಕ್ನೋಗೆ ಹೋಗಲು ಕೇವಲ 3 ಗಂಟೆಗಳು ಬೇಕಾಗುತ್ತದೆ ಅಷ್ಟೇ. ಈ ಲಿಂಕ್ ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಬರಲಿದ್ದು, ಇದರಿಂದ ಉದ್ಯೋಗವಕಾಶಗಳು ಕೂಡ ದೊರೆದಂತಾಗಲಿವೆ.




