HEALTH TIPS

Punjab Assembly Bypolls | ಲುಧಿಯಾನದಲ್ಲಿ ಗೆದ್ದು ಕ್ಷೇತ್ರ ಉಳಿಸಿಕೊಂಡ ಎಎಪಿ

ಲುಧಿಯಾನ: ಎಎಪಿ ಶಾಸಕ ಗುರಪ್ರೀತ್‌ ಬಸ್ಸಿ ಗೋಪಿ ನಿಧನದಿಂದ ತೆರವಾಗಿದ್ದ ಪಂಜಾಬ್‌ನ ಲುಧಿಯಾನ ಪಶ್ಚಿಮ ಕ್ಷೇತ್ರದಲ್ಲಿ ಜೂನ್‌ 19ರಂದು ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಎಎಪಿ ಪಕ್ಷ ಕ್ಷೇತ್ರವನ್ನು ಉಳಿಸಿಕೊಂಡಿದೆ. 

ಎಎಪಿಯ ಅಭ್ಯರ್ಥಿ ಸಂಜೀವ್ ಅರೋರಾ ಅವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಭರತ್ ಭೂಷಣ್‌ ಅಶು ವಿರುದ್ಧ 10,637 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

ಅರೋರಾ 35,179 ಹಾಗೂ ಅಶು 24,542 ಮತಗಳನ್ನು ಗಳಿಸಿದ್ದಾರೆ. ಕಣದಲ್ಲಿದ್ದ ಬಿಜೆಪಿಯ ಜಿವಾನ್‌ ಗುಪ್ತಾ 20,323, ಶಿರೋಮಣಿ ಅಕಾಲಿಕ ದಳದ ಪರುಪ್‌ಕರ್‌ ಸಿಂಗ್‌ 8,203 ಮತಗಳನ್ನು ಗಳಿಸಿದ್ದಾರೆ.

ಎಎಪಿಯ ಶಾಸಕ ಗುರಪ್ರೀತ್‌ ಬಸ್ಸಿ ಗೋಪಿ ಅವರು ಜನವರಿಯಲ್ಲಿ ನಿಧನರಾಗಿದ್ದಾರೆ.

ಎಎಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಅರೋರಾ ಮನೆಯ ಎದುರು ಹಾಗೂ ಲುಧಿಯಾನದಲ್ಲಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್ ತಿರಸ್ಕರಿಸಿದ ಜನ: ಕೇಜ್ರಿವಾಲ್‌

ಗುಜರಾತ್‌ನ ವಿಸಾವದರ ಕ್ಷೇತ್ರದಲ್ಲಿ ಎಎಪಿ ಗೆಲುವು ಸಾಧಿಸಿದೆ. ಪಕ್ಷದ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌, ಜನರು ಬಿಜೆಪಿಯಿಂದ ಬೇಸತ್ತು ಹೋಗಿದ್ದಾರೆ. ಹೀಗಾಗಿಯೇ ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಉಪಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಪಂಜಾಬ್‌ನ ಜನ ಎಎಪಿಯ ಕೆಲಸಗಳನ್ನು ಎಷ್ಟರಮಟ್ಟಿಗೆ ಮೆಚ್ಚಿಕೊಂಡಿದ್ದಾರೆ ಎನ್ನುವುದನ್ನು ಲುಧಿಯಾನ ಕ್ಷೇತ್ರದಲ್ಲಿನ ಎಎಪಿಯ ಗೆಲುವು ಹೇಳುತ್ತದೆ. ಗುಜರಾತ್‌ ಮತ್ತು ಪಂಜಾಬ್‌ ಜನರಿಗೆ ಧನ್ಯವಾದ ಹೇಳುತ್ತೇನೆ. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries