ಕುಂಬಳೆ: ಕೃಷಿ ಅಗತ್ಯಗಳಿಗೆ ನದಿಯಿಂದ ನೀರೆತ್ತುವುದನ್ನು ನಿರ್ಬಂಧಿಸುವ ಮತ್ತು ಕೃಷಿ ಅಗತ್ಯಗಳಿಗೆ ಉಚಿತ ವಿದ್ಯುತ್ ನಿಲ್ಲಿಸುವ ಕ್ರಮವು ರೈತ ಸಮುದಾಯಕ್ಕೆ ಗಂಭೀರ ಸವಾಲಾಗಿದೆ ಮತ್ತು ರೈತ ವಿರೋಧಿ ಕ್ರಮಗಳು ಮುಂದುವರಿಯುತ್ತಿರುವುದು ಖಂಡನಾರ್ಹ.ಈ ನಿಟ್ಟಿನಲ್ಲಿ ಕಿಸಾನ್ ಸೇನೆ ಪುತ್ತಿಗೆ ಪಂಚಾಯತಿ ಸಮಿತಿ ಪ್ರತಿಭಟನೆಗಿಳಿದಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೃಷಿ ಅಗತ್ಯಗಳಿಗೆ ನದಿಯಿಂದ ಮೋಟಾರ್ ಬಳಸಿ ನೀರು ಬಳಸಬಾರದು ಮತ್ತು ಕೊಳವೆ ಬಾವಿಗಳಿಂದ ನೀರನ್ನು ಕೃಷಿಗೆ ಬಳಸಿದರೆ ಉಚಿತ ವಿದ್ಯುತ್ ಲಭ್ಯವಿರುವುದಿಲ್ಲ ಎಂಬ ಸರ್ಕಾರದ ಅಪ್ರಬುದ್ಧ ನಡೆಗಳು ರೈತರಿಗೆ ಕರಾಳ ಕಾನೂನಾಗಿದೆ. ಇಂತಹ ತುಘಲಕ್ ಕಾನೂನು ವಿರುದ್ದ ಪುತ್ತಿಗೆ ಪಂಚಾಯತಿ ಕಿಸಾನ್ ಸೇನಾ ಸಮಿತಿಯ ನೇತೃತ್ವದಲ್ಲಿ, ಇನ್ನೂರಕ್ಕೂ ಹೆಚ್ಚು ರೈತರನ್ನು ಉಚಿತ ವಿದ್ಯುತ್ ಯೋಜನೆಯಿಂದ ಹೊರಗಿಟ್ಟ ಪುತ್ತಿಗೆ ಕೃಷಿ ಭವನ ಕ್ರಮದ ವಿರುದ್ಧ ಕಿಸಾನ್ ಸೇನೆಯು ಜುಲೈ 10 ರ ಗುರುವಾರ ಬೆಳಿಗ್ಗೆ 10.30 ಕ್ಕೆ ಕಟ್ಟತ್ತಡ್ಕದಿಂದ ಪುತ್ತಿಗೆ ಕೃಷಿ ಭವನಕ್ಕೆ ಸಾಮೂಹಿಕ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.
ಕೃಷಿ ಭವನವೇ ರೈತರ ವಿದ್ಯುತ್ ಬಾಕಿ ಪಾವತಿಸಬೇಕು, ಸರ್ಕಾರದ ಸುತ್ತೋಲೆಗೆ ಹೆದರಿ ಈಗಾಗಲೇ ಬಾಕಿ ಪಾವತಿಸಿದ ರೈತರಿಗೆ ಹಣವನ್ನು ಮರುಪಾವತಿಸಬೇಕು, ಉಚಿತ ವಿದ್ಯುತ್ ಯೋಜನೆಯಲ್ಲಿ ಹೊರಗಿಡಲಾದ ರೈತರನ್ನು ಸೇರಿಸಬೇಕು ಮತ್ತು ಕೃಷಿ ಅಗತ್ಯಗಳಿಗೆ ಮೋಟಾರ್ ಬಳಸಿ ನದಿಯಿಂದ ನೀರು ಬಳಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ. ಜಿಲ್ಲೆಯ ಶಾಸಕರು ಮತ್ತು ಕೃಷಿ ಸಚಿವರು ರೈತರ ಸಮಸ್ಯೆಗಳನ್ನು ಪರಿಹರಿಸಲು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಕಿಸಾನ್ ಸೇನಾ ಪದಾಧಿಕಾರಿಗಳು ಒತ್ತಾಯಿಸಿದರು.
ಕಿಸಾನ್ ಸೇನಾ ಜಿಲ್ಲಾ ಕಾರ್ಯದರ್ಶಿ ಶುಕೂರ್ ಕಾನಾಜೆ, ಕಿಸಾನ್ ಸೇನೆಯ ಪುತ್ತಿಗೆ ಪಂಚಾಯತಿ ಘಟಕದ ಅಧ್ಯಕ್ಷ ಪಿ. ಅಬ್ದುಲ್ಲ ಕಂಡತ್ತಿಲ್, ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ.ಎ. ಅಡ್ಕತೊಟ್ಟಿ, ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಗೆ ಮತ್ತು ಜೊತೆ ಕಾರ್ಯದರ್ಶಿ ಪ್ರಸಾದ್ ಕಕ್ಕೆಪ್ಪಾಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.






