ಕಾಸರಗೋಡು: ಖಾಸಗಿ ಬಸ್ ಮಾಲಿಕರ ಸಂಘಟನೆ ಮತ್ತು ಸಾರಿಗೆ ಆಯುಕ್ತರ ಮಧ್ಯೆ ಸೋಮವಾರ ನಡೆದ ಚರ್ಚೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯಾದ್ಯಂತ ಜು. 8ರಂದು ಸಾಂಕೇತಿಕ ಮುಷ್ಕರ ಮುಂದುವರಿಸಲು ತೀರ್ಮಾನಿಸಲಾಗಿದೆ. ಜುಲೈ 22ರಿಂದ ನಡೆಸಲುದ್ದೇಶಿಸಿರುವ ಅನಿರ್ಧಿಷ್ಟಾವಧಿಕಾಲ ಮುಷ್ಕರದ ಪೂರ್ವಭಾವಿಯಾಗಿ ಈ ಸೂಚನಾ ಮುಷ್ಕರ ನಡೆಯಲಿದೆ.
ಕೇರಳದ ಶಾಲಾ ವಿದ್ಯಾರ್ಥಿಗಳ ಖಾಸಗಿ ಬಸ್ ಪ್ರಯಾಣ ದರವನ್ನು ಕನಿಷ್ಟ ಐದು ರೂ. ಗೆ ಹೆಚ್ಚಿಸುವುದು ದೀರ್ಘದೂರ ಹಾಗೂ ಲಿಮಿಟೆಡ್ ಸ್ಟಾಪ್ ಬಸ್‍ಗಳ ಪರವಾನಗಿ ಸಕಾಲದಲ್ಲಿ ನವೀಕರಿಸಿ ನೀಡಬೇಕು, ಜಸ್ಟೀಸ್ ರಾಮಚಂದ್ರನ್ ಆಯೋಗದ ವರದಿ ಜಾರಿಗೊಳಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.
ಆರು ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಬೇಡಿಕೆ ಈಡೇರುವ ವರೆಗೆ ಜು. 22ರಿಂದ ಅನಿಶ್ಚಿತಕಾಲ ಮುಷ್ಕರ ಹಮ್ಮಿಕೊಳ್ಳಲಾಗುವುದು. ಬಸ್ ಮಾಲಿಕರ ಸಂಘದ ವಿವಿಧ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಈಗಾಗಲೇ ಮನವಿ ಸಲ್ಲಿಸಿರುವುದಲ್ಲದೆ, ನಿರಾಹಾರ ಸತ್ಯಾಗ್ರಹ, ಧರಣಿ, ಪ್ರತಿಭಟನಾ ಸಂಗಮ ಸೇರಿದಂತೆ ವಿವಿಧ ಹೋರಾಟ ನಡೆಸಿದ್ದರೂ, ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗದಿರುವುದರಿಂದ ಅನಿವಾರ್ಯವಾಗಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವುದಾಗಿ ಬಸ್ ಮಾಲಿಕರ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.


