ಕಾಸರಗೋಡು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಮೂರು ವರ್ಷದ ಒಂದು ಮಗು, ಮಹಿಳೆ ಹಾಗೂ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶೇಣಿ ಬಲ್ತಕಲ್ಲು ನಿವಾಸಿ ಗಂಗಾಧರ ಎಂಬವರ ಪತ್ನಿ ಚಿತ್ರಕಲಾ ತನ್ನ ಮೂರರ ಹರೆಯದ ಪುತ್ರಿ ಜತೆ ಜು. 1 ರಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪತಿ ಗಂಗಾಧರ ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ.
ಬೇಕಲ ಪುದಿಯ ಭಗವತೀ ವಳಪ್ಪು ನಿವಾಸಿ ಸಂಗೀತಾ(21) ಜುಲೈ 5 ರಿಂದ ನಾಪತ್ತೆಯಾಗಿರುವ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಂಗೀತಾ ತಾಯಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದ್ದು, ಯುವತಿ ಎರ್ನಾಕುಳಂನಲ್ಲಿರುವ ಬಗ್ಗೆ ಮಾಹಿತಿ ಲಭಿಸಿದೆ.
ಇನ್ನೊಂದು ಘಟನೆಯಲ್ಲಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಏದಾರು ನಿವಾಸಿ ವಾಸಂತಿ ಎಂಬವರ ಪುತ್ರಿ ಅಶ್ವಿನಿ(28)ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜು. 5ರಂದು ಮನೆಯಿಂದ ಹೊರಟವಳು ವಾಪಸಾಗಿಲ್ಲ ಎಂದು ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಕೇಸು ದಾಖಲಾಗಿದೆ. ಪೊಲೀಸರು ಸೈಬರ್‍ಸೆಲ್ ಮೂಲಕ ತಪಾಸಣೆ ನಡೆಸುವ ಮಧ್ಯೆ ಈಕೆ ಕಾಞಂಗಾಡು ವ್ಯಾಪ್ತಿಯಲ್ಲಿರುವ ಬಗ್ಗೆ ಮಾಹಿತಿ ಲಭಿಸಿದೆ.


