ಕಾಸರಗೋಡು: ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಮತ್ತು ಕಳವಳಕಾರಿಯಾಗಿರುವುದಾಗಿ ಕೇರಳ ರಾಜ್ಯ ಮಹಿಳಾ ಆಯೋಗದ ಸದಸ್ಯೆ ವಕೀಲೆ ಪಿ. ಕುಞËಯಿಷಾ ತಿಳಿಸಿದ್ದಾರೆ.
ಅವರು ಕೇರಳ ಮಹಿಳಾ ಆಯೋಗವು ಕಾಸರಗೋಡು ಜಿಲ್ಲೆಯಲ್ಲಿ ನಡೆಸಿದ ಅದಾಲತ್‍ನಲ್ಲಿ ಮಾತನಾಡಿದರು. ಕೌಟುಂಬಿಕ ಪರಿಸರದಲ್ಲಿನ ಸಮಸ್ಯೆಯನ್ನು ಪರಿಹರಿಸಲು, ಹುಡುಗಿಯರ ಕುಟುಂಬ ಮತ್ತು ಸಮಾಜದಿಂದ ಉತ್ತಮ ಬೆಂಬಲವನ್ನು ಪಡೆಯಬೇಕು ಎಂದು ತಿಳಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೇರಳ ರಾಜ್ಯ ಮಹಿಳಾ ಆಯೋಗದ ಸಭೆ ನಡೆಯಿತು. ಕೌಟುಂಬಿಕ ಹಿಂಸೆ, ಆಸ್ತಿ ವಿವಾದ, ಕೌಟುಂಬಿಕ, ಚಿನ್ನ ಮತ್ತು ಭೂಮಿ ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳು ಆಯೋಗದ ಮುಂದೆ ವಿಚಾರಣೆಗೆ ಬಂದಿತ್ತು.
ಒಟ್ಟು 52 ದೂರುಗಳನ್ನು ಸಭೆಯಲ್ಲಿ ಪರಿಗಣಿಸಲಾಗಿದ್ದು, ಇದರಲ್ಲಿ ಒಂಬತ್ತು ದೂರುಗಳಿಗೆ ಪರಿಹಾರ ಕಲ್ಪಿಸಲಾಯಿತು. ಒಂದು ದೂರನ್ನು ವಿಜಿಲೆನ್ಸ್ ಸಮಿತಿಗೆ ಬಿಟ್ಟುಕೊಡಲಾಗಿದ್ದು, ಉಳಿದ 42 ದೂರುಗಳನ್ನು ಮುಂದಿನ ಸಭೆಗೆ ಮುಂದೂಡಲಾಯಿತು. ಸಭೆಯಲ್ಲಿ ಮಹಿಳಾ ಸೆಲ್ ಎಸ್.ಐ ಎಂ.ವಿ. ಶರಣ್ಯ, ಎಎಸ್‍ಐ ಎ.ಎಂ. ಶಾರದ, ಕುಟುಂಬ ಸಲಹೆಗಾರ್ತಿ ರಮ್ಯಾಮೋಳ್, ಜಿಲ್ಲಾ ಜಾಗೃತ ಸಮಿತಿ ಕೌನ್ಸಿಲರ್ ಪಿ.ಸುಕುಮಾರಿ, ಐಸಿಡಿಎಸ್ ಜಿಲ್ಲಾ ಮಿಷನ್ ಸಂಯೋಜಕಿ ಅಮಲಾ ಮ್ಯಾಥ್ಯೂ ಮೊದಲಾದವರು ಉಪಸ್ಥಿತರಿದ್ದರು.





