HEALTH TIPS

ಸತತ 53 ದಿನ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿ ಸೆರೆ ಹಿಡಿದ ಕೇರಳ ಅರಣ್ಯ ಇಲಾಖೆ

ಮಲಪ್ಪುರಂ: ಕೇರಳ ಅರಣ್ಯ ಇಲಾಖೆ ಸತತ 53 ದಿನ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿಯೊಂದನ್ನು ಸೆರೆ ಹಿಡಿದಿರುವ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

13 ವರ್ಷದ ಗಂಡು ಹುಲಿ ಮೇ 15 ರಂದು ಮಲಪ್ಪುರಂ ಜಿಲ್ಲೆಯ ಕಲಿಕಾವು ಬಳಿ ರಬ್ಬರ್ ತೋಟದಲ್ಲಿ 45 ವರ್ಷದ ಗಫೂರ್ ಎಂಬ ಕಾರ್ಮಿಕನ ಮೇಲೆ ದಾಳಿ ಮಾಡಿ ಕೊಂದು, ಆತನನ್ನು ಎಳೆದೊಯ್ದು ತಿಂದಿತ್ತು.

ಘಟನೆ ಬಳಿಕ ಸ್ಥಳೀಯರು ಆತಂಕಗೊಂಡು ಹುಲಿ ಸೆರೆಗೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಿದ್ದರು.

ಸೆರೆ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ ಹುಲಿ ತಪ್ಪಿಸಿಕೊಂಡು ತಿರುಗುತ್ತಿತ್ತು. ಅರಣ್ಯ ಸಿಬ್ಬಂದಿ, ಪೊಲೀಸ್ ಇಲಾಖೆ ಸಹಕಾರ ಹಾಗೂ ಕುಮ್ಕಿ ಆನೆಗಳ ಬಲದಿಂದ ಸತತ ಹುಡುಕಾಟ ನಡೆಸಿದ್ದರು. ಆದರೂ ಹುಲಿ ಸಿಕ್ಕಿರಲಿಲ್ಲ. ಕೆಲ ದಿನಗಳಿಂದ ಕಲಿಕಾವು ಬಳಿ ಕಾಡಿನಲ್ಲಿ ಹಲವಾರು ಕಡೆ ಬೋನುಗಳನ್ನು ಇರಿಸಿದ್ದರು. ಕಡೆಗೂ ಭಾನುವಾರ ಬೆಳಿಗ್ಗೆ ಒಂದು ಬೋನಿನಲ್ಲಿ ಹುಲಿ ಸೆರೆಯಾಗಿದೆ.

ಹುಲಿ ಸೆರೆಯಾದ ಸುದ್ದಿ ತಿಳಿದು ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಸೇರಿದ್ದರು. ಹುಲಿಯನ್ನು ಕಲಿಕಾವು ಕಾಡಿನಲ್ಲೇ ಬಿಡಬಾರದು ಎಂದು ಪ್ರತಿಭಟನೆ ನಡೆಸಿದರು. ಹುಲಿಗೆ 13 ವರ್ಷ ವಯಸ್ಸಾಗಿರುವುದರಿಂದ ಕಾಡಿನಲ್ಲಿ ಬಿಡುವುದಿಲ್ಲ ಎಂಬ ಭರವಸೆ ನಂತರ ಪ್ರತಿಭಟನಾಕಾರರು ಹಿಂದೆ ಸರಿದಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಅರಣ್ಯ ಸಚಿವ ಎ.ಕೆ. ಶಶಿಧರನ್ ಅವರು, ಹುಲಿ ಸದ್ಯ ಆರೋಗ್ಯವಾಗಿದ್ದು ಅದನ್ನು ಅರಣ್ಯ ಇಲಾಖೆಯ ಸುಪರ್ಧಿಯಲ್ಲಿ ಇರಿಸಲಾಗುವುದು. ಇದು ಕೇರಳದಲ್ಲಿ ಇತ್ತೀಚೆಗೆ ಅತಿ ದೀರ್ಘಾವಧಿಯ ಹುಲಿ ಸೆರೆ ಕಾರ್ಯಾಚರಣೆ ಆಗಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries