ಕಾಸರಗೋಡು: ನಾಡಿನೆಲ್ಲೆಡೆ ನಾಗರಪಂಚಮಿಯನ್ನು ಭಕ್ತಿ, ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು. ಕಾಸರಗೊಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದ ನಾಗರಕಟ್ಟೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸನಿಹದ ನಾಗನ ಕಟ್ಟೆ, ಬೇಳ ಕುಮಾರಮಂಗಲ, ವರ್ಕಾರಿ ಕಾವಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮವ್ವಾರು ಶ್ರೀಕೃಷ್ಣ ಭಜನಾಮಂದಿರ ವಠಾರ, ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯ ವಠಾರದ ನಾಗನಕಟ್ಟೆ, ವಿವಿಧ ಬನಗಳು, ತರವಾಡು ಮನೆಗಳಲ್ಲಿ ನಾಗಾರಾಧನೆ ನಡೆಯಿತು.
ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಶ್ರೀ ದೇವರ ಆರಾಟು ಕೆರೆ ಸನಿಹದ ದೇವರ ಮೂಲಸ್ಥಾನದಲ್ಲಿ ನಾಗರ ಪಂಚಮಿ ಉತ್ಸವ ಜರಗಿತು. ಸೂರ್ಯನಾರಾಯಣ ಅವರ ಪೌರೋಹಿತ್ಯದಲ್ಲಿ ಶ್ರೀದೇವರಿಗೆ ಪಂಚಾಮೃತ ಅಭಿಷೇಕ,ಕ್ಷೀರಾಭಿಷೇಕ,ಸೀಯಾಳಭಿಷೇಕ ನಡೆಯಿತು. ಈ ಸಂದರ್ಭ ನಾಗರಾಜ ಕಟ್ಟೆ ಸಮಿತಿಯ ಅಧ್ಯಕ್ಷ ಡಾ.ಕೆ.ಎನ್.ವೆಂಕಟರಮಣ ಹೊಳ್ಳ,ಉಪಾಧ್ಯಕ್ಷರಾದ ಲಕ್ಷ್ಮೀಶ ಭಟ್, ಸುಜಯ ಕುಮಾರ್, ಕಾರ್ಯದರ್ಶಿ ಸಾಯಿನಾಥ ರಾವ್, ಕೋಶಾಧಿಕಾರಿ ಮಹೇಶ್ ಭಟ್ ಹಾಗೂ ಪರಿಸರವಾಸಿಗಳಾದ ಭಕ್ತಾದಿಗಳು ಪಾಲ್ಗೊಂಡಿದ್ದರು.ನಾಗರಪಂಚಮಿ ದಿನದಂದು ಹಗಲು ಮಳೆ ಸಂಪೂರ್ಣ ದೂರಾಗಿದ್ದರಿಂದ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವುಂಟಾಗಿತ್ತು.
ಕಾಸರಗೋಡು ಬ್ಯಾಂಕ್ ರಸ್ತೆಯ ನಾಗರಾಜ ಕಟ್ಟೆಯಲ್ಲಿ ನಾಗರಪಂಚಮಿ ಅಂಗವಾಗಿ ನಾಗದೇವರಿಗೆ ಅಭಿಚೇಕ ನಡೆಯಿತು.




