ಕಾಸರಗೋಡು: ಚೆರುವತ್ತೂರು ಮಾಡಕ್ಕರ ಅಳಿವೆಯಲ್ಲಿನ ಮರಳು ದಿಣ್ಣೆ ತೆಗೆಯಲು ತುರ್ತು ಕ್ರಮ ಕೈಗೊಳ್ಳುವಂತೆ ಕೇರಳ ಮೀನುಗಾರಿಕೆ ಮತ್ತು ಬಂದರು ಎಂಜಿನಿಯರಿಂಗ್ ಖಾತೆ ಸಚಿವ ಸಜಿ ಚೆರಿಯನ್ ಅವರನ್ನು ಒತ್ತಾಯಿಸುವ ಮನವಿಯನ್ನು ಸಿ.ಪಿ.ಎಂ. ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಅವರಿಗೆ ಎನ್.ಎಸ್.ಪಿ.ಎಸ್. ಪದಾಧಿಕಾರಿಗಳು ಹಸ್ತಾಂತರಿಸಿದರು.
ಚೆರ್ವತ್ತೂರು ಮಾಡಕ್ಕರ ಬಂದರನ್ನು ಬಹಳಷ್ಟು ಕಾರ್ಮಿಕರು ಬಳಸಿಕೊಲ್ಳುತ್ತಿದ್ದು, ಲ್ಲಿ ಹೂಳು ತುಂಬಿಕೊಮಡಿರುವ ಹಿನ್ನೆಲೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತಿದೆ. ಮರಳಿನ ದಿಬ್ಬದಿಂದಾಗಿ ಸಣ್ಣ ದೋಣಿಗಳು, ಇನ್-ಬೋಟ್‍ಗಳು, ಲೇಲ್ಯಾಂಡ್ ಮತ್ತು ಇತರ ಮೀನುಗಾರಿಕಾ ದೋಣಿಗಳಿಗೆ ಸಮಸ್ಯೆಎದುರಾಗುತ್ತಿದೆ. ಇತ್ತೀಚೆಗಷ್ಟೆ ಯಾಂತ್ರಿಕೃತ ಫೈಬರ್ ದೋಣಿ ಮಗುಚಿ ಬಿದ್ದ ಪರಿಣಾಮ ಒಂಬತ್ತು ಮೀನುಗಾರರು ಗಾಯಗೊಂಡಿರುವುದಲ್ಲದೆ, ದೋಣಿ ಸಮುದ್ರಕ್ಕೆ ಕೊಚ್ಚಿಹೋಗಿತ್ತು, ಎರಡು ಎಂಜಿನ್‍ಗಳು ಮತ್ತು ಒಂದು ಬಲೆ ಕಳೆದುಹೋಗಿದೆ. ಮೀನು ಎಳೆಯಲು ಬಳಸಲಾಗಿದ್ದ ಯಂತ್ರೋಪಕರಣಗಳು ಮತ್ತು ಸಲಕರಣೆಗಳು ಸಹ ನಾಶಗೊಂಡಿದೆ. ಟ್ರಾಲಿಂಗ್ ನಿಷೇಧವು ಕೊನೆಗೊಳ್ಳಲಿರುವ ಕಾರಣ, ಮೀನುಗಾರರು ಎದುರಿಸುತ್ತಿರುವ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮರಳು ದಿಬ್ಬವನ್ನು ತೆರವುಗೊಳಿಸುವ ಮೂಲಕ ಮೀನುಗಾರಿಕೆಗೆ ಅಗತ್ಯ ಸೌಕರ್ಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಮಾಡಕ್ಕರ ಅಳಿವೆಯ ಮೀನುಗಾರರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದು ತ್ವರಿತವಾಗಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಂ. ರಾಜಗೋಪಾಲನ್ ಭರವಸೆ ನೀಡಿದರು. ಎನ್‍ಸಿಪಿ ಎಸ್ ಜಿಲ್ಲಾಧ್ಯಕ್ಷ ಕರೀಮ್ ಚಂದೇರ, ಉಪಾಧ್ಯಕ್ಷ ರಾಜು ಕೊಯ್ಯೋನ್, ಪ್ರಧಾನ ಕಾರ್ಯದರ್ಶಿಗಳಾದ ಟಿ. ನಾರಾಯಣನ್ ಮಾಸ್ಟರ್, ಉದಿನೂರ್ ಸುಕುಮಾರನ್ ಮತ್ತು ತ್ರಿಕರಿಪುರ ಬ್ಲಾಕ್ ಅಧ್ಯಕ್ಷ ಎಂ.ಟಿ.ಪಿ. ಹ್ಯಾರಿಸ್ ಉಪಸ್ಥಿತರಿದ್ದರು.





