ಕಾಸರಗೋಡು: ಚೆರ್ಕಳದಿಂದ ಚಟ್ಟಂಚಾಲ್ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನ:ಸ್ಥಾಪಿಸಿರುವುದಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವರದಿ ಆಧರಿಸಿ ಈ ಆದೇಶ ಹೊರಡಿಸಲಾಗಿದೆ.
ಎಂಜಿನಿಯರ್‍ಗಳು ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪನಿಯು ವಾಹನ ಸಂಚಾರದ ಬಗ್ಗೆ ನಿರಂತರ ನಿಗಾಯಿರಿಸುವುದರ ಜತೆಗೆ ಮೇಲ್ವಿಚಾರಣೆ ಮಾಡಬೇಕು. ಅಗತ್ಯ ಸೈನ್‍ಬೋರ್ಡ್‍ಗಳು, ಬೀದಿದೀಪಗಳು ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳು ಜಾರಿಯಲ್ಲಿವೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅನುಷ್ಠಾನ ಸಂಸ್ಥೆಯ ಜವಾಬ್ದಾರಿಯಾಗಿದೆ. ಭಾರೀ ಮಳೆ ಮತ್ತು ರೆಡ್ ಅಲರ್ಟ್ ಸಂಭವಿಸಿದಲ್ಲಿ, ವಾಹನ ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಹಳೇ ಮಾರ್ಗವಾದ ಕಾಸರಗೋಡು-ಚಟ್ಟಂಚಲ್ ರಸ್ತೆಯಲ್ಲಿ ವಾಃನ ಸಂಚಾರಕ್ಕೆ ವ್ಯವಸ್ಥೆಮಾಡಿಕೊಡಬೇಕು. ರಾಷ್ಟ್ರೀಯ ಹೆದ್ದಾರಿ ಸುರಕ್ಷತಾ ಮಾರ್ಗಸೂಚಿ ಪಾಲಿಸದೆ ಸಂಭವಿಸುವ ಅಪಘಾತಗಳಿಗೆ ಪ್ರಾಧಿಕಾರವು ಸಂಪೂರ್ಣ ಜವಾಬ್ದಾರಿ ವಹಿಸಬೇಕಾಗುವುದು.
ಜೂನ್ 16ರಿಂದ ಪ್ರಸಕ್ತ ರಸ್ತೆಯಲ್ಲಿ ಭಾರೀ ಭೂಕುಸಿತ ಉಂಟಾಘಿದ್ದ ಹಿನ್ನೆಲೆಯಲ್ಲಿ ಘನವಾಹನಗಳ ಸಂಚಾರವನ್ನು ಚೆರ್ಕಳದಿಂದ ಚಟ್ಟಂಚಾಲ್ ವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಪ್ರಸಕ್ತ ಎಂಜಿನಿಯರ್‍ಗಳು ಮತ್ತು ಯೋಜನಾ ನಿರ್ದೇಶಕರ ವರದಿಗಳ ಆಧಾರದ ಮೇಲೆ, ಚೆರ್ಕಳದಿಂದ ಚಟ್ಟಂಚಾಲ್ ವರೆಗೆ ರಸ್ತೆ ಎಡಭಾಗದಲ್ಲಿ (ಎಲ್‍ಎಚ್‍ಎಸ್) ತಾತ್ಕಾಲಿಕ ಸರ್ವೀಸ್ ರಸ್ತೆಗಳನ್ನು ಸಿದ್ಧಪಡಿಸಲಾಗಿದೆ. ತಜ್ಞರ ತಪಾಸಣೆ ನಂತರ ರಸ್ತೆ ಸಂಚಾರಕ್ಕೆ ಅನುಯೋಜ್ಯವಾಗಿರುವುದನ್ನು ಖಚಿತಪಡಿಸಿದ ನಂತರವೇ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.




