ಕಾಸರಗೋಡು: ನಗರಸಭೆ 33ನೇ ವಾರ್ಡು ಬೀರಂತಬೈಲಿನಲ್ಲಿ ಅಮೃತ್2:0ಕುಡಿಯುವ ನೀರಿನ ಯೋಜನೆಗೆ ಪೈಪು ಅಳವಡಿಸಲು ತೆಗೆದಿರುವ ಹೊಂಡದಿಂದ ಈ ಪ್ರದೇಶದ ರಸ್ತೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.
ನೀರಿನ ಪೈಪು ಅಳವಡಿಸಲು ರಸ್ತೆ ಅಂಚಿಗೆ ಹೊಂಡ ಅಗೆದು ಪೈಪು ಅಳವಡಿಸಿದ್ದರೂ, ಇದನ್ನು ಸರಿಯಾಗಿ ಮುಚ್ಚದಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರ ಪಾಲಿಗೆ ಬೀರಂತಬೈಲು ರಸ್ತೆ ಮರಣಗುಂಡಿಗಳಾಗುತ್ತಿದೆ. ಹಲವು ದ್ವಿಚಕ್ರವಾಹನಗಳು ರಸ್ತೆ ಅಂಚಿನ ಹೊಂಡಕ್ಕೆ ಬಿದ್ದು ಅಪಘಾತ ಸಂಭವಿಸಿದೆ. ಈ ಹಾದಿಯಾಗಿ ಆಟೋ ರಿಕ್ಷಾ ಚಾಲಕರು ಬಾಡಿಗೆ ತೆರಳಲೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಸಂಕಷ್ಟ ಅನುಭವಿಸುವಂತಾಗಿದೆ.
ಇನ್ನು ಪಾದಚಾರಿಗಳಿಗೂ ನಡೆದಾಡಲಾಗದ ಸ್ಥಿತಿಯಿದೆ. ಹಲವು ಮಂದಿ ಪಾದಚಾರಿಗಳು ಹೊಂಡಕ್ಕೆ ಬಿದ್ದಪರಿಣಾಮ ಗಾಯಗಳುಂಟಾಗಿದೆ. ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ನೀರಿನ ಪೈಪು ಅಳವಡಿಸುವ ನೆಪದಲ್ಲಿ ಸಂಪೂರ್ಣ ಹಾಳುಗೆಡಹಲಾಗಿದೆ. ವಿಪರ್ಯಾಸವೆಂದರೆ ಒಂದು ವರ್ಷದ ಹಿಂದೆ ಆರಂಭಿಸಿರುವ ಅಮೃತ್ ಕುಡಿಯುವ ನೀರು ವಿತರಣೆಗಾಗಿ ಪೈಪು ಅಳವಡಿಸುವ ಕಾಮಗಾರಿಯನ್ನು ಇನ್ನೂ ಪೂರ್ತಿಗೊಳಿಸದೆ ಅಧಿಕಾರಿಗಳು ವಾರ್ಡಿನ ಜನತೆಯೊಂದಿಗೆ ಚೆಲ್ಲಾಟವಾಡುವುದನ್ನು ಕೊನೆಗೊಳಿಸುವಂತೆ ಸ್ಥಳೀಯ ಜನತೆ ಆಗ್ರಹಿಸಿದ್ದಾರೆ. ರಸ್ತೆ ದುರಸ್ತಿಪಡಿಸಲು ಮುಂದಾಗದಿರುವುದನ್ನು ಪ್ರತಿಭಟಿಸಿ ನಾಗರಿಕರು ಹೋರಾಟಕ್ಕೆ ಸಜ್ಜಾಗಿದ್ದಾರೆ.
-






