ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಇಬ್ಬರು ಪುತ್ರಿಯರಿಗೆ ಚಿಕಿತ್ಸೆ ಮರೆಯಲ್ಲಿ ಕಿರುಕುಳ ನೀಡಲೆತ್ನಿಸಿ ಬಂಧಿತನಾಗಿರುವ ಕನ್ಣೂರು ತಳಿಪರಂಬದ ಕಕ್ಕಾಟ್‍ನಲ್ಲಿ ವಾಸಿಸುತ್ತಿರುವ ಪೆರ್ಲ ನಿವಾಸಿ ಹಾಗೂ ನಕಲಿ ವೈದ್ಯ ಶಿಹಾಬುದ್ದೀನ್(55)ಎಂಬಾತನನ್ನು ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಬಿಟ್ಟುಕೊಡುವಂತೆ ಹೊಸದುರ್ಗ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮಹಿಳೆಯ ಇಬ್ಬರು ಮಕ್ಕಳಿಗೆ ಕಾಣಿಸಿಕೊಂಡಿದ್ದ ಅಸೌಖ್ಯವನ್ನು ತಾನು ಗುಣಪಡಿಸುವುದಾಗಿ ಮಹಿಳೆಗೆ ತಿಳಿಸಿದ್ದನು. ಔಷಧದ ಜತೆಗೆ ಮಾಂತ್ರಿಕ ವಿದ್ಯೆಯನ್ನೂ ಕಲಿತಿರುವುದಾಗಿ ತಿಳಿಸಿ ಅವರನ್ನು ತಳಿಪರಂಬದ ಮನೆಗೆ ಕರೆಸಿಕೊಂಡು, ಅಲ್ಲಿ ಕಿರುಕುಳ ನೀಡಿರುವುದಾಗಿ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಮಹಿಳೆ ಇಬ್ಬರು ಪುತ್ರಿಯರ ಗಂಡಂದಿರು ವಿದೇಶದಲ್ಲಿದ್ದು, ಇವರು ಊರಿಗೆ ವಾಪಸಾದಾಗ ನಕಲಿ ಮಾಂತ್ರಿಕನ ಕಪಟತನ ಬೆಳಕಿಗೆ ಬಮದಿತ್ತು. ಪೊಲೀಸರು ಬಂಧಿಸಿದ ಅಲ್ಪ ಹೊತ್ತಿನಲ್ಲಿ ಈತನಿಗೆ ಅಸೌಖ್ಯ ಕಾಣಿಸಿಕೊಂಡಿದ್ದು, ಈತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈತನ ವಿರುದ್ಧ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯ ವಿವಿಧೆಡೆ ವಂಚನೆ ನಡೆಸಿರುವ ಬಗ್ಗೆ ಕೇಸು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

