ಮಂಜೇಶ್ವರ: ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರು ಅಹರ್ನಿಶಿ ದುಡಿಯುತ್ತಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅನುಪಮವಾದುದು ಎಂದು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ. ಆರ್. ಶೆಟ್ಟಿ ಅಭಿಪ್ರಾಯಪಟ್ಟರು.
ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪ್ರಭಾಕರ ರೈ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಗೌರವನ್ನು ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಆರೋಗ್ಯಪೂರ್ಣ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನು ಉನ್ನತ ಮಟ್ಟದ ಗುರಿಯೆಡೆಗೆ ಕೊಂಡೊಯ್ಯಬೇಕು ಎಂದರು.
ಶಾಲಾ ಸಂಚಾಲಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮೃದುಲ. ಕೆ.ಎಂ, ಪ್ರೌಢ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ, ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹೊನ್ನಕಟ್ಟೆ, ಅಧ್ಯಾಪಕರಾದ ರವಿಲೋಚನ. ಸಿ. ಎಚ್, ಮಂಜೇಶ್ವರ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಮೇಲ್ವಿಚಾರಕ ದಿಲೀಪ್ ಶುಭಾಶಂಸನೆಗೈದರು. ಪ್ರಾಂಶುಪಾಲ ರಮೇಶ್. ಕೆ.ಎನ್. ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ರಾಜೇಂದ್ರನ್. ಕೆ.ಪಿ. ವಂದಿಸಿದರು. ಹರೀಶ.ಜಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.




.jpg)
