ಕಾಸರಗೋಡು: ಕರಾವಳಿಯ ಗಂಡುಮೆಟ್ಟಿನ ಕಲೆ ಯಕ್ಷಗಾನ ಮನರಂಜನೆ ಜತೆಗೆ ಕಲಾವಿದರಿಗೆ ಜೀವನ ಕಟ್ಟಿಕೊಟ್ಟ ಕಲಾಪ್ರಾಕಾರವಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಎಲ್ ಧರ್ಮ ತಿಳಿಸಿದ್ದಾರೆ.
ಅವರು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಐದನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ವತಿಯಿಂದ ನಡೆದ ಅಮೋಘ ಯಕ್ಷಗಾನ ತಾಳಮದ್ದಳೆ ದಶಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನದಲ್ಲಿ ಬರುವ ಪ್ರತಿಯೊಂದುಪಾತ್ರವೂ ನಮ್ಮ ಮೌಲ್ಯಯುತ ಬದುಕಿಗೆ ಪೂರಕವಾಗಿದೆ. ಮನುಷ್ಯ ಸಂಬಂಧಕ್ಕೆ ಹೆಚ್ಚಿನ ಬೆಲೆ ಕಲ್ಪಿಸಿಕೊಡುವಲ್ಲಿ ಯಕ್ಷಗಾನದಂತಹ ಕಲೆಯಿಂದ ಸಾಧ್ಯವಾಗಿದೆ. ಸಂಗೀತ, ಸಾಹಿತ್ಯ, ಯಕ್ಷಗಾನದಂತಹ ಕಲಾಪ್ರಕಾರಗಳಿಗೆ ಶ್ರೀಮಠದ ಕೊಡುಗೆ ಮಹತ್ತರವಾದುದು ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಐಎಎಸ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಉದ್ಯಮಿ, ಮುಂಡಪ್ಪಳ್ಳ ಶ್ರೀರಾಜರಾಜೇಶ್ವರೀ ದೇವಸ್ಥಾನ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿ, ಖ್ಯಾತ ಜ್ಯೋತಿಷಿ ಪದ್ಮನಾಭ ಶರ್ಮ ಇರಿಞËಲಕುಡ ಮುಖ್ಯ ಅತಿಥಿಯಾಗಿ ಭಾಗವಹಿಹಸಿದ್ದರು. ಈ ಸಂದರ್ಭ ಬಡಗು ತಿಟ್ಟಿನ ಹಿರಿಯ ಭಾಗವತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೊಳಗಿ ಕೇಶವ ಹೆಗಡೆ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ತಾಳಮದ್ದಳೆ ದಶಾಹ ಕಾರ್ಯಕ್ರಮದ ಸಂಯೋಜಕ, ಖ್ಯಾತ ಕಲಾವಿದ ವಾಸುದೇವ ರಂಗ ಭಟ್ಟ ಅವರನ್ನು ಸ್ವಾಮೀಜಿ ಆಶೀರ್ವದಿಸಿದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸದಸ್ಯ ಸೇರಾಜೆ ಸತ್ಯನಾರಾಯಣ ಭಟ್ಟ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ 'ಕೃಷ್ಣ ಸಂಧಾನ'ಯಕ್ಷಗಾನ ತಾಳಮದ್ದಲೆ ಜರುಗಿತು.





