ವಯನಾಡ್ : ಭೀಕರ ಭೂಕುಸಿತ ಕಂಡ ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್‌ಮಲ ಗ್ರಾಮಗಳಲ್ಲಿ ಇಂದು (ಬುಧವಾರ) ಮೌನ ಆವರಿಸಿತ್ತು. 250ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ದುರಂತದ ಸ್ಮರಣಾರ್ಥ ನೂರಾರು ಜನ ಅಲ್ಲಿ ಸೇರಿದ್ದರು.
2024ರ ಜುಲೈ 29-30ರ ತಡರಾತ್ರಿ ಚೂರಲ್‌ಮಲ, ಮುಂಡಕ್ಕೈ ಮತ್ತು ಪುಂಜಿರಿಮಟ್ಟಂ ಭಾಗಗಳಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ನೂರಾರು ಜನ ಜೀವಂತ ಸಮಾಧಿಯಾಗಿದ್ದರು.
ಸಾವಿರಾರು ಜನರ ಕುಟುಂಬ ಹಾಗೂ ಆಸ್ತಿಗಳು ಮಣ್ಣುಪಾಲಾಗಿದ್ದವು.
ಪುತ್ತುಮಲದಲ್ಲಿ ಸಾರ್ವಜನಿಕ ಸ್ಮಶಾನ ನಿರ್ಮಿಸಲಾಗಿತ್ತು. ದುರಂತದ ನೆನಪಿಗಾಗಿ ಮೆಪ್ಪಾಡಿ ಪಂಚಾಯತ್ ಆ ಸ್ಥಳಕ್ಕೆ 'ಹೃದಯ ಭೂಮಿ' (heart land) ಎಂದು ಹೆಸರಿಸಿತ್ತು.
ಈ ಭೀಕರ ದುರಂತಕ್ಕೀಗ ಒಂದು ವರ್ಷ. ಈ ಹಿನ್ನೆಲೆ 264 ಸಂತ್ರಸ್ತರ ಸಮಾಧಿ ಸ್ಥಳವಾದ ಈ 'ಹೃದಯ ಭೂಮಿ'ಯಲ್ಲಿ ಇಂದು ನೂರಾರು ಜನ ಸೇರಿದ್ದು, ಗೌರವ ನಮನ ಸಲ್ಲಿಸಿದ್ದಾರೆ. ಜೀವಂತವಾಗಿ ಸಮಾಧಿಯಾದ ಪ್ರೀತಿಪಾತ್ರರನ್ನು ನೆನೆದು ಸೇರಿದ್ದ ಜನ ಕಣ್ಣೀರಾದರು.
'ಈ ದಿನವನ್ನು ನೆನಪಿಸಿಕೊಳ್ಳಲು ನಾನು ಎಂದಿಗೂ ಬಯಸುವುದಿಲ್ಲ, ಆದರೆ ನೆನಪುಗಳು ಕಾಡುತ್ತವೆ. ನಾವು ಒಬ್ಬರನ್ನೊಬ್ಬರು ನೋಡಲು ಮತ್ತೆಂದೂ ಸಾಧ್ಯವಿಲ್ಲ. ದುಃಖವನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ' ಎಂದು ದುರಂತದಲ್ಲಿ ತನ್ನ ಕುಟುಂಬದ 26 ಸದಸ್ಯರನ್ನು ಕಳೆದುಕೊಂಡ ಮನೋಜ್ ಭಾವುಕರಾದರು.
ಮೆಪ್ಪಾಡಿಯಲ್ಲಿ ಸ್ಮರಣಾರ್ಥ ಕಾರ್ಯಕ್ರಮ ನಡೆಸಲಾಯಿತು. ರಾಜಕೀಯ ಮುಖಂಡರು ಮತ್ತು ಇತರ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ಬೆಳಿಗ್ಗೆ ಸರ್ವಧರ್ಮಗಳ ಪ್ರಾರ್ಥನಾ ಸಭೆಯೂ ನಡೆಯಿತು.




