ಕಾಸರಗೋಡು: ಶಿಕ್ಷಣದಲ್ಲಿ ಮಹತ್ವದ ಸುಧಾರಣೆ ತರುವುದರೊಂದಿಗೆ, ಹೊಸ ಪೀಳಿಗೆಗಾಗಿ ತಾಂತ್ರಿಕ ಕೋರ್ಸ್‍ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೇರಳದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವ ಡಾ.ಆರ್ ಬಿಂದು ಹೇಳಿದರು.
ರಾಜ್ಯ ಸರ್ಕಾರದ ಐದನೇ 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ ಕಾಸರಗೋಡು ಪೊವ್ವಲ್‍ನ ಲಾಲ್‍ಬಹದ್ದೂರ್ ಶಾಸ್ತ್ರಿ(ಎಲ್‍ಬಿಎಸ್) ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾರಂಭವಾಗುತ್ತಿರುವ ಐದು ಯೋಜನೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕೇರಳ ಕಳೆದ ನಾಲ್ಕು ವರ್ಷಗಳಲ್ಲಿ 6,000 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ನೀತಿ ಆಯೋಗದ ಅಂಕಿಅಂಶಗಳ ಪ್ರಕಾರ, ಕೇರಳ ಸರ್ಕಾರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗರಿಷ್ಠ ಮೊತ್ತ ಖರ್ಚು ಮಾಡುವ ರಾಜ್ಯವಾಗಿ ಮಾರ್ಪಟ್ಟಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ ಮತ್ತು ವ್ಯವಹಾರ ವ್ಯವಸ್ಥೆಗಳು, ಅಗ್ನಿಶಾಮಕ ಮತ್ತು ಸುರಕ್ಷತಾ ವ್ಯವಸ್ಥೆಗಳಂತಹ ಬಿ.ಟೆಕ್ ಕೋರ್ಸ್‍ಗಳಿಗೆ ಹೆಚ್ಚುವರಿ ತರಗತಿ, ನವೀಕರಿಸಿದ ವಿದ್ಯುತ್ ಇಲಾಖೆ ಬ್ಲಾಕನ್ನು ಸಚಿವರು ಉದ್ಘಾಟಿಸಿದರು. ಕಾಲೇಜಿನ ಇಲೆಕ್ಟ್ರಾಣಿಕ್ ವಿಭಾಗಕ್ಕೆ ಮಾನ್ಯತೆ ದೊರೆತಿರುವುದನ್ನು ಸಚಿವರು ಘೋಷಿಸಿದರು.
ಉದುಮ ಶಾಸಕ ಸಿ.ಎಚ್. ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅಕಾಡೆಮಿಕ್ ಅಲೈಯನ್ಸ್‍ನ ಟಿಸಿಎಸ್ ಅಕಾಡೆಮಿಯ ಗ್ರೂಪ್ ಮುಖ್ಯಸ್ಥ ಡಾ. ಕೆ.ಎಂ. ಸುಶೀಂದ್ರನ್ ಮುಖ್ಯ ಭಾಷಣ ಮಾಡಿದರು. ಮುಳಿಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ವಿ. ಮಿನಿ, ವಾರ್ಡ್ ಸದಸ್ಯೆ ನಬೀಸಾ ಸತ್ತಾರ್, ಎಲ್‍ಬಿಎಸ್ ಕೇಂದ್ರದ ಜಂಟಿ ನಿರ್ದೇಶಕ ಡಾ. ಜೆ. ಜಯಮೋಹನ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಅಕಾಡೆಮಿ ಅಲೈಯನ್ಸ್ ಕೇರಳ ಪ್ರದೇಶ ಮುಖ್ಯಸ್ಥ ರಾಜೀವ್ ಶ್ರೀನಿವಾಸ್, ಎಲ್‍ಬಿಎಸ್ ಎಂಜಿನಿಯರಿಂಗ್ ಕಾಲೇಜು ಪಿಟಿಎ ಉಪಾಧ್ಯಕ್ಷ ಮುಜೀಬ್ ರೆಹಮಾನ್ ಮಾಙËಡ್ ಮತ್ತು ಪಿಟಿಎ ಕಾರ್ಯದರ್ಶಿ ಸಿ.ವಿ. ಕೃಷ್ಣನ್ ಉಪಸ್ಥಿತರಿದ್ದರು.





