ಕಾಸರಗೋಡು: ಬಿರುಸಿನ ಮಳೆಗೆ ಜಿಲ್ಲೆಯಲ್ಲಿ ವ್ಯಾಪಕ ನಾಶನಷ್ಟ ಉಂಟಾಗಿದೆ. ಚೆರ್ವತ್ತೂರಿನ ಕುಲಂಗಾಟ್, ಮಂಜೇಶ್ವರದ ವರ್ಕಾಡಿ, ಬಾಕ್ರಬೈಲಿನ ಕಜೆ ಪ್ರದೇಶದಲ್ಲಿ ಭೂಮಿಯಲ್ಲಿ ಬಿರುಕು ಹಾಗೂ ಭಾರೀ ಭೂಕುಸಿತ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಕೊಡ್ಲಮೊಗರು, ಬೊಡ್ಡೋಡಿ, ಮತ್ತು ಪೆÇಯ್ಯೆತಬೈಲು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಕೃಷಿ ಮತ್ತು ಆಸ್ತಿಪಾಸ್ತಿಗಳಿಗೆ ವ್ಯಾಪಕ ಹಾನಿಯುಂಟಾಗಿದೆ. ಅಲ್ಲದೆ, ತಿಮ್ಮಂಗೂರು ಅಣೆ-ನಡಿಬಯಲು ರಸ್ತೆಯಲ್ಲಿ ಭೂಕುಸಿತದಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಬಿರುಸಿನ ಮಳೆಗೆ ಜಿಲ್ಲೆಯ ಬಹುತೇಕ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಬಂಬ್ರಾಣ ಬಯಲು ಪ್ರದೇಶದಲ್ಲಿ ನೆರೆನೀರು ತುಂಬಿಕೊಂಡಿರುವ ಪ್ರದೇಶದಿಂದ ಸ್ಥಳೀಯರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಾಂತರಿಸಿದರು.
ಮಂಜೇಶ್ವರ ವರ್ಕಾಡಿಯ ಪಾತೂರು ಕಜೆ ಪರಿಸರದಲ್ಲಿ ಭಾರೀ ಮಳೆಗೆ ಭೂಮಿ ಅಲ್ಲಲ್ಲಿ ಆಳ ಗಾತ್ರದಲ್ಲಿ ಬಿರುಕುಬಿಟ್ಟಿರುವುದು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷ ಮಳೆಗಾಲದಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟ ಅದೇ ಜಾಗದಲ್ಲಿ ಮತ್ತು ಆಸುಮಾಸಿನ ಇತರ ಪ್ರದೇಶದಲ್ಲಿ ಈ ಬಾರಿ ಅಲ್ಲಲ್ಲಿ ಭೂಮಿ ಸೀಳು ಬಿಟ್ಟಿದೆ. ಇದರೊಳಗೆ ನೀರು ತುಂಬಿಕೊಂಡಲ್ಲಿ ಭಾರೀ ಭೂಕುಸಿತಕ್ಕೆ ಎಡೆಮಾಡಿಕೊಡಲಿದ್ದು, ನಾಗರಿಕರು ತೀವ್ರ ಆತಂಕದಲ್ಲಿದ್ದಾರೆ.
ಬಿಜೆಪಿ ನಿಯೋಗ ಭೇಟಿ:
ಸಮುದ್ರ ಕೊರೆತ ಹಾಗೂ ಭೂಕುಸಿತದಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನಿಯೋಗ ಶುಕ್ರವಾರ ಭೇಟಿ ನೀಡಿದೆ. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಹಾಗೂ ಉದುಮ ಮಂಡಲ ನೇತಾರರು ಸಮುದ್ರ ಕೊರೆತದಿಂದ ಹಾನಿಗೀಡಾಗಿರುವ ತ್ರಿಕ್ಕನ್ನಾಡು ತ್ರಯಂಬಕೇಶ್ವರ ದೇವಾಲಯ ಎದುರಿನ ರಸ್ತೆ ಹಾಗೂ ಇತರ ಪ್ರದೇಶಕ್ಕೆ ಭೇಟಿ ನೀಡಿ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿತು.
ಮಂಜೇಶ್ವರ ಮಂಡಲದ ವಿವಿಧೆಡೆ ವಿವಿಧೆಡೆ ಉಂಟಾಗಿರುವ ಹಾನಿ ಪ್ರದೇಶಗಳಿಗೂ ಭೇಟಿ ನೀಡಿದರು. ಅಧ್ಯಕ್ಷ ಆದರ್ಶ್ ಬಿ.ಎಂ., ವೋರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಭಾಸ್ಕರ್ ಪೆÇಯ್ಯ, ಹಿರಿಯ ಮುಖಂಡ ಧೂಮಪ್ಪ ಶೆಟ್ಟಿ, ಹಾಗೂ ಪಂಚಾಯತ್ ಜನಪ್ರತಿನಿಧಿ ಪದ್ಮಾವತಿ ಅವರು ಎಂ.ಎಲ್ ಅಶ್ವಿನಿ ಜತೆಗಿದ್ದರು.
ಚಿತ್ರಗಳು: 1)ತುಂಬಿ ಹರಿಯುತ್ತಿರುವ ಗಡಿಗ್ರಾಮ ಎಣ್ಮಕಜೆ ಪಂಚಾಯತಿಯ ಬಾಕಿಲಪದವು ಬಳಿ ಹರಿಯುವ ಸೀರೆ ಹೊಳೆ.
2): ತ್ರಿಕ್ಕನ್ನಾಡ್ ತ್ರಯಂಬಕೇಶ್ವರ ದೇವಾಲಯದ ಎದುರಿನ ರಸ್ತೆ ಸಮುದ್ರದ ಅಲೆಗೆ ಸಿಲುಕಿ ಹಾನಿಗೀಡಾಗಿರುವ ಪ್ರದೇಶಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ನೇತೃತ್ವದ ತಂಡ ಭೇಟಿ ನೀಡಿತು.
3)ಬಿರುಸಿನ ಮಳೆಗೆ ಪುತ್ತಿಗೆ ಹೊಳೆ ತುಂಬಿ ಹರಿಯುತ್ತಿದೆ.

.jpg)


