HEALTH TIPS

ಪೌರಾಣಿಕ ಕಥಾ ಭಾಗಗಳು ಮೌಲ್ಯಯುತ ಬದುಕಿಗೆ ಪೂರಕ - ಡಾ. ಪಿ.ಎಲ್. ಧರ್ಮ- ಎಡನೀರು ಮಠದಲ್ಲಿ ಕೀಲಾರು ಪ್ರತಿಷ್ಠಾನದ ಯಕ್ಷಗಾನ ದಶಾಹ ತಾಳಮದ್ದಳೆಯ ಸಮಾರೋಪದಲ್ಲಿ ಅಭಿಮತ

ಬದಿಯಡ್ಕ: ಕಲೆ, ಸಂಸ್ಕøತಿಗೆ ಪ್ರೋತ್ಸಾಹವನ್ನು ನೀಡುವ ಮೂಲಕ ಈ ದೇಶವನ್ನು ಸಾವಿರಾರು ವರ್ಷಗಳ ತನಕ ಉಳಿಸಿಕೊಳ್ಳಲಿರುವ ಚೇತನವನ್ನು ಶ್ರೀಗಳು ಅನುಗ್ರಹಿಸುತ್ತಾ ನಮ್ಮೆಲ್ಲರಲ್ಲಿ ಹೊಸ ಮನಸ್ಸನ್ನು ಸೃಷ್ಟಿಮಾಡುತ್ತಿದ್ದೀರಿ. ನಮ್ಮ ಸನಾತನ ಪರಂಪರೆ ನಿರಂತರ ಮುಂದುವರಿಯಬೇಕಾದರೆ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಿಕೊಡುವ ಕಾರ್ಯವಾಗಬೇಕು. ಮ್ಯಾಜಿಕ್ ಮೂಲಕ ಸತ್ಯ, ಧರ್ಮ, ಗೌರವ, ನಂಬಿಕೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಮಕ್ಕಳನ್ನು ಇದಕ್ಕೆ ಪೂರಕವಾಗಿ ಬೆಳೆಸದಿದ್ದಲ್ಲಿ ನಾವು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಮಠಮಂದಿರಗಳಿಗೆ ಸಣ್ಣಮಕ್ಕಳು, ಯುವಕರು ಆಗಮಿಸುವಂತಾಗಬೇಕು ಎಂಬುದನ್ನು ಹೆತ್ತವರು ಗಮನಿಸಬೇಕು. ಪೌರಾಣಿಕ ಕಥಾ ಭಾಗಗಳಲ್ಲಿ ಬರುವ ಕಥಾಪಾತ್ರಗಳು ನಮ್ಮ ಉತ್ತಮ, ಮೌಲ್ಯಯುತ ಬದುಕಿಗೆ ಪೂರಕವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಡಾ. ಪಿ.ಎಲ್. ಧರ್ಮ ತಿಳಿಸಿದರು.


ಎಡನೀರು ಮಠದಲ್ಲಿ ಭಾನುವಾರ ಸಂಜೆ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ನಡೆಯುತ್ತಿರುವ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಾಯೋಜಿತ ಯಕ್ಷಗಾನ ತಾಳಮದ್ದಳೆ ದಶಾಹದ ಸಮಾರೋಪ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 

ಮನುಷ್ಯ ಸಂಬಂಧಕ್ಕೆ ಬೆಲೆಯಿದೆ ಎಂಬುದು ಗಂಡುಕಲೆ ಯಕ್ಷಗಾನದಲ್ಲಿ ಚಿತ್ರಣವಾಗುತ್ತದೆ. ರಾಷ್ಟ್ರೀಯತೆಯನ್ನು ಉಳಿಸಿಕೊಳ್ಳಬೇಕು. ಹಿಂಸೆ, ಮತ್ಸರ, ಇತರರ ಬದುಕಿನೊಂದಿಗೆ ಆಟ ಆಡುವುದು ಯಾವತ್ತೂ ಶಾಶ್ವತವಲ್ಲ. ಗಂಡುಕಲೆಗೆ ಈ ಪುಣ್ಯಕ್ಷೇತ್ರವು ವರ್ಷಾನುಗಟ್ಟಲೆ ಬೆಂಬಲವನ್ನು ನೀಡುತ್ತಾ ಬರುತ್ತಿದೆ. ಗಡಿನಾಡಿನ ಭಾಗದಲ್ಲಿ ಕನ್ನಡ ಮತ್ತು ಮಲಯಾಳಂ ಭಾಷೆಗಳೊಂದಿಗೆ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಎಡನೀರು ಮಠವು ಬದುಕಿನಲ್ಲಿ ಹೃದಯವನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಿದೆ. ದೇಶದಲ್ಲಿರುವ ಎಲ್ಲಾ ಆತಂಕಗಳಿಗೂ ಒಂದು ಪರಿಹಾರವಿದೆ. ಗುರುದೇವರ ನಿತ್ಯ ದರ್ಶನದಿಂದ ನಮ್ಮೊಳಗಿನ ಅಹಂಕಾರಗಳು ಕರಗಿ ನಿಜವಾದ ಮನುಷ್ಯನಾಗಲು ಸಾಧ್ಯವಿದೆ. ನಮ್ಮೊಳಗಿನ ಅಹಂಕಾರವನ್ನು ತ್ಯಾಗಮಾಡಬೇಕು. ಶಿಕ್ಷಣವು ಬೆಳಕನ್ನು ನೀಡುತ್ತದೆ ಎಂದು ತಿಳಿಸಿದ ಅವರು ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಮತ್ತು ಬದುಕಿನ ಆಯಾಮವನ್ನು ಒಟ್ಟುಗೂಡಿಸುವ ಕಾರ್ಯ ಇಲ್ಲಿ ನಡೆಯುತ್ತದೆ ಎಂದರು.

ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡಿ, ಐವತ್ತು ವರ್ಷಗಳ ಹಿಂದೆಯೇ ಹಿರಿಯ ಗುರುಗಳು ಅವರ ಪ್ರತೀ ಚಾತುರ್ಮಾಸ್ಯದ ಸಂದರ್ಭದಲ್ಲಿ ಯಕ್ಷಗಾನ ಸಪ್ತಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಪ್ರಸ್ತುತ ಕೀಲಾರು ಪ್ರತಿಷ್ಠಾನದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜನ ನಿರೀಕ್ಷಿಸುವ ಮಟ್ಟದಲ್ಲಿ ಶ್ರೇಷ್ಠತೆ, ಗುಣಮಟ್ಟದ ರೀತಿಯಲ್ಲಿ ನಡೆದುಕೊಂಡುಬರುತ್ತಿದೆ. ಯಕ್ಷಗಾನ ತಾಳಮದ್ದಳೆಯು ಬುದ್ಧಿಗೆ ಗ್ರಾಸವಾದ ಕಲೆಯಾಗಿದೆ. ನಮ್ಮ ಕರಾವಳಿಯಾದ್ಯಂತ ಕನ್ನಡವನ್ನು ಬೆಳೆಸುವುದರೊಂದಿಗೆ ನಮ್ಮ ಮಕ್ಕಳಿಗೆ ಸಂಸ್ಕಾರವನ್ನೂ ನೀಡಿದ ಕಲೆಯಾಗಿದೆ ಯಕ್ಷಗಾನ. ನಮ್ಮ ಸಮಾಜಕ್ಕೆ ಪುರಾಣದ ಮಾಹಿತಿಗಳನ್ನು ಮತ್ತು ಒಳ್ಳೆಯ ಕಥೆಗಳನ್ನು ಯಕ್ಷಗಾನವು ತಿಳಿಸಿದೆ. ಕ್ಷೇತ್ರಕಲೆಗಳಿಗೆ ಪ್ರೋತ್ಸಾಹ ಲಭಿಸಿ ಇನ್ನಷ್ಟು ಹೆಚ್ಚಿನ ಪ್ರೋತ್ಸಾಹ ದೊರೆಯುವುದರೊಂದಿಗೆ ಭಾರತೀಯ ಸಂಸ್ಕøತಿ, ನಮ್ಮ ದೇಶದ ಕಲೆಗಳ ಮಹತ್ವ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬೇಕು ಎಂದರು. 

ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಿದ್ಧ ಜ್ಯೋತಿಷಿ ಪದ್ಮನಾಭ ಶರ್ಮ ಇರಿಂಜಾಲಕುಡ, ಮುಂಡಪ್ಪಳ್ಳ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಮಾಜಸೇವಕ ಉದ್ಯಮಿ ಕೆ.ಕೆ.ಶೆಟ್ಟಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಡಗುತಿಟ್ಟಿನ ಹಿರಿಯ ಭಾಗವತ ಕೊಳಗಿ ಕೇಶವ ಹೆಗಡೆ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ದಶಾಹ ಕಾರ್ಯಕ್ರಮದ ಸಂಯೋಜಕ ಪ್ರಸಿದ್ಧ ಯಕ್ಷಗಾನ ಕಲಾವಿದ ವಾಸುದೇವ ರಂಗ ಭಟ್ಟ ಅವರನ್ನು ಶ್ರೀಗಳು ಶಾಲು ಹೊದೆಸಿ ಆಶೀರ್ವದಿಸಿದರು. ಶ್ರೀಮಠದ ಆಡಳಿತ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಕೀಲಾರು ಪ್ರತಿಷ್ಠಾನದ ಸದಸ್ಯ ಸೇರಾಜೆ ಸತ್ಯನಾರಾಯಣ ಭಟ್ಟ ವಂದಿಸಿದರು. ನಂತರ ಪ್ರಸಿದ್ಧ ಕಲಾವಿದರಿಂದ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries