ಮಂಜೇಶ್ವರ: ತುಳು ಭಾಷೆ, ಲಿಪಿ, ಸಾಹಿತ್ಯ ಮತ್ತು ಸಂಸ್ಕøತಿಯ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವ ಬಹುಮುಖ ಪ್ರತಿಭೆ ವಿನೋದ ಪ್ರಸಾದ್ ರೈ ಕಾರಿಂಜ ಅವರನ್ನು ತುಳುವ ಮಹಾಸಭೆ ಮಂಜೇಶ್ವರ ತಾಲೂಕು ಸಂಚಾಲಕಿಯಾಗಿ ಅಧಿಕೃತವಾಗಿ ನೇಮಕ ಮಾಡಲಾಗಿದೆ. ಅವರು ಪಡೆಯುವ ಈ ಹೊಣೆಗಾರಿಕೆ, ಶತಮಾನೋತ್ಸವದತ್ತ ಹೆಜ್ಜೆ ಇಡುತ್ತಿರುವ ತುಳುವ ಮಹಾಸಭೆಯ ಪುನಶ್ಚೇತನ ಕಾರ್ಯದ ಸಶಕ್ತ ಭಾಗವಾಗಲಿದೆ.
ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದು ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಭಾಷೆಯ ಡಿಪ್ಲೊಮಾ ಪೂರೈಸಿದ ವಿನೋದ, ಈಗ ತುಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ನಿಷ್ಠೆಯಿಂದ ಶ್ರಮಿಸುತ್ತಿದ್ದಾರೆ. ಪತಿ ಜಯಪ್ರಸಾದ್ ರೈ ಅವರ ಹೋಟೆಲ್ ಉದ್ಯಮದಲ್ಲಿಯೂ ಅವರು ಸಕ್ರಿಯ ಸಹಭಾಗಿಯಾಗಿದ್ದು, ಕುಟುಂಬದ ಜವಾಬ್ದಾರಿ ಹಾಗೂ ಸಮಾಜಸೇವೆ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಜೈ ತುಳುನಾಡ್ ಸಂಘಟನೆಯ ಕೇಂದ್ರ ಸಮಿತಿ ಉಪಾಧ್ಯಕ್ಷೆಯಾಗಿ, ಮಂಜೇಶ್ವರ ತಾಲೂಕಿನ ಉದ್ಯಾವರ ಮಾಡ, ಕಾಸರಗೋಡು ಜಿಲ್ಲೆಯ ಕಳತ್ತೂರು ಶಾಲೆ ಮತ್ತು ಇತರ ಶಾಲಾ ಕಾಲೇಜುಗಳಲ್ಲಿ ತುಳು ಲಿಪಿ ತರಗತಿಗಳನ್ನು ನಿರಂತರವಾಗಿ ನಡೆಸುತ್ತಾ, ಆನ್‍ಲೈನ್ ತರಗತಿಗಳ ಮೂಲಕ ದೇಶ ವಿದೇಶದ ತುಳುವರಿಗೂ ಲಿಪಿ ಕಲಿಕೆಯ ಬೆಳಕು ಹರಡಿದ್ದಾರೆ.
'ತುಳು ಲಿಪಿಯ ಬ್ರಹ್ಮ' ವೆಂಕಟರಾಜ ಪುಣೀಂಚಿತ್ತಾಯರು ವಿದ್ಯಾಭ್ಯಾಸ ಮಾಡಿದ ನೀರ್ಚಾಲು ಶಾಲೆಯಲ್ಲಿ ಮೊದಲ ಬಾರಿಗೆ ಲಿಪಿ ತರಗತಿ ನೀಡಿದ ಗೌರವ ಇವರಿಗಿದೆ ಎಂಬುದು ಅಪರೂಪದ ಹೆಮ್ಮ,
ತುಳು ವಿಕಿಪೀಡಿಯಾ ಸಂಪಾದಕಿ ಮತ್ತು ಲೇಖಕಿ, ಪೂವರಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ತುಳು ಅಂಕಣ ಬರಹಗಾರ್ತಿ, ವಿಕಿ ಮೀಟ್‍ಅಪ್‍ಗಳಲ್ಲಿ (ಬೆಂಗಳೂರು, ಭುವನೇಶ್ವರ) ಭಾಗವಹಿಸಿ ಜ್ಞಾನ ವಿನಿಮಯ, ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮಗಳ ನಿರೂಪಣೆ, ಭಜನೆ, ಗಮಕ ವಾಚನ, ಯಕ್ಷಗಾನ ತಾಳ ಮದ್ದಳೆಯಲ್ಲಿ ಅರ್ಥಗಾರಿಕ ಕಲಾವಿದೆ, ವಿವಿಧ ಸಂಘ-ಸಂಸ್ಥೆಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಪದಾಧಿಕಾರಿ.
1928ರಲ್ಲಿ ಎಸ್. ಯು. ಪಣಿಯಾಡಿ ಅವರ ನಾಯಕತ್ವದಲ್ಲಿ ಸ್ಥಾಪಿತ ತುಳುವ ಮಹಾಸಭೆ, ಶತಮಾನೋತ್ಸವದ ದಶಕದ ಹೆಜ್ಜೆಗಳಲ್ಲಿ ಪುನಶ್ಚೇತನಗೊಳ್ಳುತ್ತಿದ್ದು, ತುಳುನಾಡಿನ ಕಲಾ, ಸಾಹಿತ್ಯ, ಜನಪದ ಪರಂಪರೆಯ ಸಂರಕ್ಷಣೆ, ತುಳುನಾಡನ್ ಕಳರಿ ತರಬೇತಿಯ ಮೂಲಕ ಸಮರ ಕಲೆ, ಮರ್ಮ ಚಿಕಿತ್ಸೆ, ನಶಿಸಿದ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ, ಜಾತಿ, ಮತ, ಭಾಷಾ ಸೌಹಾರ್ದತೆಗೆ ಒತ್ತು ಮುಂತಾದ ಗುರಿಗಳನ್ನು ಸಾಧಿಸಲು ಪ್ರತಿ ತಾಲೂಕು ಮಟ್ಟದಲ್ಲಿ ಪ್ರತಿ ಗ್ರಾಮಗಳಲ್ಲಿ ಅಲ್ಲಲ್ಲಿ ಸಮಿತಿಗಳನ್ನು ರೂಪಿಸಲಾಗುತ್ತಿದ್ದು, ಮಂಜೇಶ್ವರ ತಾಲೂಕಿನಲ್ಲಿ ಶ್ರೀಮತಿ ವಿನೋದ ಪ್ರಸಾದ್ ರೈ ಅವರ ನೇತೃತ್ವದಲ್ಲಿ ಹೊಸ ಚಟುವಟಿಕೆಗಳಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ತುಳುವ ಮಹಾಸಭೆ ಹಾಗೂ ತಾಯ್ನಾಡು ತುಳುನಾಡ್ ಮೇಲೆ ತಮ್ಮ ಅಪಾರ ಪ್ರೀತಿ ಹಾಗೂ ಸೇವಾ ಮನೋಭಾವದಿಂದಲೇ ಶ್ರೀಮತಿ ವಿನೋದ ಪ್ರಸಾದ್ ರೈ ಅವರ ಈ ನೇಮಕ ಆಭಿಮಾನಿಗಳಿಗೆ ಹೆಮ್ಮೆ ತರಿಸುತ್ತಿದೆ.




.jpg)
