ಬದಿಯಡ್ಕ: ಜೀವಸತ್ವ ಒದಗಿಸುವ ಅನ್ನ-ಅಕ್ಕಿಗೆ ಮೂಲವಾದ ಭತ್ತದ ಬೆಳೆ-ನಾಟಿಯ ಬಗ್ಗೆ ಅರಿವು ಒದಗಿಸುವ ನಿಟ್ಟಿನಲ್ಲಿ ನೀರ್ಚಾಲು ಬನವಾಸಿಯ ನೂತನ ಗದ್ದೆಯಲ್ಲಿ ಭಾನುವಾರ ನಡೆದ ಕಂಡೊಕೋರಿ ಉತ್ಸವ ಗಮನಾರ್ಹವಾಯಿತು.
ಭತ್ತದ ಬೆಳೆಯ ಬಗ್ಗೆ ಸಿದ್ದಾಂತವಾದಕ್ಕಿಂತ ಆಚೆಗೆ ಪ್ರಾಯೋಗಿಕ ನೆಲೆಯಲ್ಲಿ ಕಾರ್ಯೋನ್ಮುಖರಾದಾಗಷ್ಟೇ ನೈಜ ಗುರಿ ತಲುಪಲು ಸಾಧ್ಯ. ಇಲ್ಲಿ ಗುರುವಾದವರೊಬ್ಬರು ಇಂತಹ ಗುರಿಯನ್ನು ನಮ್ಮಿದಿರು ತೆರೆದಿರಿಸಿದ್ದಾರೆ ಎಂದು ಉತ್ಸವ ಉದ್ಘಾಟಿಸಿದ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ತಿಳಿಸಿದರು.
ಜಿಲ್ಲೆಯ 13 ಶಾಲೆಗಳ ಆಸಕ್ತ ನೂರಾರು ವಿದ್ಯಾರ್ಥಿಗಳು, ಸ್ಥಳೀಯರು, ಜನ ಪ್ರತಿನಿಧಿಗಳುಹೆತ್ತವರು, ಕೃಷಿಕರು, ಕೃಷಿ ತಜ್ಞರು,ವೈದ್ಯರು ಮೊದಲಾದವರು ಸಮಾರಂಭಕ್ಕೆ ಸಾಕ್ಷಿಯಾದರು. ನೂತನ ಗದ್ದೆಯಲ್ಲಿ ಮಕ್ಕಳಿಗೆ ವಿವಿಧ ಗ್ರಾಮೀಣ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಜನಪದ ಕೃಷಿ ಕಲಾವಿದೆ ಲಕ್ಷ್ಮೀ ಕುಂಬ್ಡಾಜೆ ಹಾಗೂ ರಾಧಾ ಮಣ್ಣಾಪು ಓ ಬೇಲೆ ಗಾಯನದೊಂದಿಗೆ ನಾಟಿ ಕಾರ್ಯಕ್ಕೆ ವಿಶೇಷ ಮೆರುಗು ನೀಡಿದರು. ಕೃಷ್ಣ ಮಣಿಯಾಣಿ ಮಲ್ಲಮೂಲೆ ಹಾಗೂ ಶ್ರೀನಿವಾಸ ಆಳ್ವ ಕಳತ್ತೂರು ಅವರು ಗೊರಗೆ, ಮುಟ್ಟಾಳೆ, ನೊಗ, ನೇಗಿಲು ಮೊದಲಾದ ಪಾರಂಪರಿಕ ಕೃಷಿ ಉಪಕರಣಗಳ ಮಹತ್ವಗಳನ್ನು ವಿವರಿಸಿದರು. ಬದಿಯಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಪ್ರಾಧ್ಯಾಪಕ ಡಾ.ರಾಜೇಶ್ ಬೆಜ್ಜಂಗಳ, ಅಧ್ಯಾಪಕ ದಿವಾಕರ ಬಲ್ಲಾಳ್, ರಾಜೇಶ್ ಮಾಸ್ತರ್ ಅಗಲ್ಪಾಡಿ, ಅನಿಲ್ ಕುಮಾರ್, ಸುಜಿತ್ ಉಪ್ಪಳ, ಜಲಜಾಕ್ಷಿ, ಮೊದಲಾದವರು ಆಟೋಟ ಸ್ಪರ್ಧೆಗೆ ನೇತೃತ್ವ ನೀಡಿದರು. ನಾಲ್ಕಂಕ್ಕಿಂತ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ
ಪೆರಡಾಲ ಸರ್ಕಾರಿ ಹೈಸ್ಕೂಲಿನ ವಿದ್ಯಾರ್ಥಿ ಸಂದೇಶ ಅವರಿಗೆ ಬನವಾಸಿ ಕಂಡೊಕೋರಿ ಬಿರ್ಸೆ ಎಂದು ಅಭಿನಂದಿಸಿ ಗೌರವಿಸಲಾಯಿತು. ಆಯೋಜಕರಾದ ಡಾ.ರತ್ನಾಕರ ಮಲ್ಲಮೂಲೆ ದಂಪತಿಗಳು ನೇತೃತ್ವ ವಹಿಸಿದ್ದರು.







